ಜಿಲ್ಲೆ

15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಲಸಿಕೆ


ಕಾರವಾರ: ಜಿಲ್ಲೆಯಲ್ಲಿ 15 ರಿಂದ 18 ವರ್ಷ ವಯೋಮಿತಿಯ ವಿದ್ಯಾರ್ಥಿಗಳಿಗೆ ಕೋವಿಡ್ ನಿಯಂತ್ರಣ ಲಸಿಕೆ ಹಾಕುವ ಕಾರ್ಯಕ್ಕೆ ಸೋಮವಾರ ಚಾಲನೆ ದೊರಕಿದ್ದು, ಮೊದಲ ದಿನವೇ 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಯಿತು. ಜಿಲ್ಲೆಯ ಎಲ್ಲ ತಾಲೂಕುಗಳ ಶಾಲೆ, ಕಾಲೇಜ್​ಗಳಿಗೇ ಆರೋಗ್ಯಾಧಿಕಾರಿ, ಸಿಬ್ಬಂದಿ ತಂಡ ತೆರಳಿ ಕೋವ್ಯಾಕ್ಸಿನ್ ಲಸಿಕೆ ನೀಡಿತು. ಜಿಲ್ಲೆಯಲ್ಲಿ ಈ ವಯೋಮಾನದ 66 ಸಾವಿರ ಜನರಿದ್ದು, ಸದ್ಯ 37 ಸಾವಿರಕ್ಕೂ ಹೆಚ್ಚು ಡೋಸ್ ಲಸಿಕೆ ಸಂಗ್ರಹವಿದೆ. ಲಸಿಕೆ ಲಭ್ಯತೆ ಇದ್ದಲ್ಲಿ ಒಂದು ವಾರದಲ್ಲಿ ಸಂಪೂರ್ಣ ಲಸಿಕಾಕರಣ ಮುಗಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ.
ಯಲ್ಲಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಿರಸಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭಟ್ಕಳದಲ್ಲಿ ಶಾಸಕ ಸುನೀಲ ನಾಯ್ಕ ಅಭಿಯಾನಕ್ಕೆ ಚಾಲನೆ ನೀಡಿದರು.

ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟರಿಗೆ ಲಸಿಕೆಯ ಮೊದಲನೇ ಡೋಸ್ ಶೇ. 98 ಹಾಗೂ ಎರಡನೇ ಡೋಸ್ ಅನ್ನು ಶೇ. 87ರಷ್ಟು ಜನರಿಗೆ ನೀಡುವ ಮೂಲಕ ಜಿಲ್ಲೆ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿದೆ.- ಶಿವರಾಮ ಹೆಬ್ಬಾರಜಿಲ್ಲಾ ಉಸ್ತುವಾರಿ ಸಚಿವ