ಜಿಲ್ಲೆ

15 ಲಕ್ಷ ರೂ.ಗೆ ಹಳ್ಳಿಕಾರ್​ ಮಾರಾಟ!

ಚಿಕ್ಕಣ್ಣಸ್ವಾಮಿಹಟ್ಟಿ ಪಾಪಣ್ಣ ಸಾಕಿದ್ದ ಹೋರಿ, ನಟ ದರ್ಶನ್​ರಿಂದ ಖರೀದಿಸಿದ್ದ ಜೋಡಿ

ಸೋರಲಮಾವು ಶ್ರೀಹರ್ಷ ತುಮಕೂರು

ನಂಬಿದ್ರೆ ನಂಬಿ, ಬಿಟ್ರೆ ಬಿಡಿ... ಬಾಯಿಗೂಡಿದ ಒಂದು ಜತೆ ಹಳ್ಳಿಕಾರ್​ ಹೋರಿಯ ಬೆಲೆ ಬರೋಬ್ಬರಿ 15 ಲಕ್ಷ ರೂಪಾಯಿ!. ಅಂದರೆ, ಬೆಸಿಕ್​ ಮಾಡೆಲ್​ ಐಷಾರಾಮಿ ಕಾರಿಗೆ ಸರಿಸಮ.

ದೇಸಿ ಹೋರಿಗಳ ಸಾಕಣೆಯಲ್ಲಿ ಆಸಕ್ತರಾಗಿರುವ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ತುಮಕೂರು ತಾಲೂಕಿನ ಹೆಬ್ಬೂರು ಚಿಕ್ಕಣ್ಣಸ್ವಾಮಿ ಹಟ್ಟಿಯ ಚಿಕ್ಕಣ್ಣಸ್ವಾಮಿ ದೇವಸ್ಥಾನದ ಅರ್ಚಕ ಪಾಪಣ್ಣ ಅವರು ಸಾಕಿದ್ದ ಹೋರಿಯನ್ನು ಮಾಲೂರು ತಾಲೂಕಿನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟೇಕಲ್​ ವೆಂಕಟೇಶ್​ ಎಂಬವರು 15 ಲಕ್ಷ ರೂ. ಕೊಟ್ಟು ಖರೀದಿ ಮಾಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ನಟ ದರ್ಶನ್​ ಮೈಸೂರಿನಲ್ಲಿ ಸಾಕಿದ್ದ ಹೋರಿಗಳನ್ನು 2024ರ ಸಿದ್ಧಗಂಗಾ ಜಾತ್ರೆಯಲ್ಲಿ 7.50 ಲಕ್ಷ ರೂ.ಗೆ ಖರೀದಿಸಿದ್ದ ಪಾಪಣ್ಣ, 11 ತಿಂಗಳು ಜತನದಿಂದ ಸಾಕಿದ್ದರು. ಸಪ್ಲಮ್​ ಜಾತ್ರೆಯಲ್ಲಿ ಹೋರಿಗಳನ್ನು ಕಟ್ಟುವ ವೆಂಕಟೇಶ್​ ಬಲವಂತ ಮಾಡಿ ದ್ದರಿಂದ ರಾಜ್ಯದಲ್ಲಿಯೇ ಅಪರೂಪ ಎಂಬಂತಿರುವ ಆರೋಗ್ಯವಂತ ಹೋರಿಗಳನ್ನು ದಾಖಲೆಯ ಬೆಲೆಗೆ ಮಾರಾಟ ಮಾಡಲು ಒಪ್ಪಿದ್ದಾರೆ. ಹಳ್ಳಿಕಾರ್​, ಅಮೃತ್​ಮಹಲ್​, ಕಿಲಾರಿ, ಗಿಡ್ಡಹೋರಿ, ನಾಟಿ ಹಸು, ಹಲ್ಲು ಮೂಡದ ಹೋರಿಗಳು ಸೇರಿ ವಿವಿಧ ದೇಸಿ ತಳಿಗಳು ಆಯಾ ಭಾಗದ ಜಾತ್ರೆಯಲ್ಲಿ ಪ್ರದರ್ಶನವಾಗುವುದು ಪ್ರತಿಷ್ಠೆ. ಇಂತಹ ಆಸಕ್ತಿ ಇರುವ ಕೆಲವರಷ್ಟೇ ಇಂತಹ ಹೋರಿಗಳನ್ನು ಖಾಯಸ್​ ಪಟ್ಟು ಕೊಂಡುಕೊಂಡು ಸಾಕಲು ಸಾಧ್ಯ. ಅಂತಹ ವಿಶೇಷ ವ್ಯಕ್ತಿಗಳ ಸಾಲಿಗೆ ಚಿಕ್ಕಣ್ಣಹಟ್ಟಿ ಪಾಪಣ್ಣ ಸೇರಿದ್ದಾರೆ.

ಈ ಬೆಲೆಬಾಳುವ ಹೋರಿಗಳು ಬರೀ ಹುಲ್ಲಷ್ಟೇ ಅಲ್ಲ, ಹಾಲು, ಮೊಸರು, ಮೊಟ್ಟೆ, ಬೆಲ್ಲ, ಧವಸ, ಧಾನ್ಯ, ವಿವಿಧ ಕಾಳುಗಳು, ಹಿಂಡಿ, ಬೂಸ ತಿಂದು ಮಜಬೂತಾಗಿ ಬೆಳೆದಿವೆ. ಎತ್ತುಗಳ ನೆರಳಿಗೆ ಅದ್ದೂರಿಯಾದ ಚಪ್ಪರ ಹಾಕಿದ್ದು, ರಾತ್ರಿ ವೇಳೆ ಮಲಗಲು ಬೆಡ್​ ಕೂಡ ವ್ಯವಸ್ಥೆ ಮಾಡಲಾಗಿದೆ. ದಿನಕ್ಕೊಮೆ ಈ ಎತ್ತುಗಳಿಗೆ ಮಾಲಿಷ್​ ಕೂಡ ಮಾಡಲಾಗುತ್ತದೆ. ಹೋರಿಗಳ ಆಹಾರವನ್ನು ಮನುಷ್ಯರಿಗೆ ನೀಡುವ ಆಹಾರದಂತೆಯೇ ಮುದ್ದೆ ಮಾಡಿ ನೀಡುವುದು ಮತ್ತೊಂದು ವಿಶೇಷ.

ಸಾಕುವುದು ಸುಲಭವಿಲ್ಲ!: ಹಳ್ಳಿಕಾರ್​ ತಳಿಯ ಹೋರಿಗಳು ನಮ್ಮ ದೇಸಿ ರಾಸುಗಳಾಗಿದ್ದು, ರಾಜ್ಯದ ಕೃಷಿಗೆ ಅವುಗಳ ಕೊಡುಗೆ ಸ್ಮರಣೀಯ. ಇಂತಹ ದೇಸಿ ತಳಿಗಳನ್ನು ರಕ್ಷಿಸುತ್ತಿರುವ ರೈತರಿಗೆ ಸರ್ಕಾರದಿಂದ ಯಾವುದೇ ಸಹಕಾರ, ಸೌಲಭ್ಯವಿಲ್ಲ. ಹೋರಿಗಳನ್ನು ರಕ್ಷಿಸಿ, ಸಾಕಲು ಸಾವಿರಾರು ರೂಪಾಯಿ ರ್ಖಚಾಗುತ್ತದೆ. ದೇಸಿ ತಳಿ ರಕ್ಷಿಸಲು ಸರ್ಕಾರ ವಿಶೇಷ ಯೋಜನೆ ತರಲಿ ಎಂಬ ಒತ್ತಾಯ ಮೊದಲಿಂದಲೂ ಇದೆ. ಇವುಗಳಿಗೆ ವಿಶಿಷ್ಟವಾದ ಆಹಾರ ಪದ್ಧತಿ ಅಗತ್ಯವಾಗಿರುತ್ತದೆ. ಹಾಲು, ಮೊಸರು, ಮೊಟ್ಟೆ, ಬೆಲ್ಲ, ಹಿಂಡಿ, ಬೂಸ ನೀಡಬೇಕು. ಪೋಷಕಾಂಶಗಳಿರುವ ತರಹೇವಾರಿ ಕಾಳುಗಳನ್ನು ಬೇಯಿಸಿ ತಿನ್ನಿಸಬೇಕು. ಪ್ರತಿದಿನವೂ ಮೈಗೆ ಮಾಲಿಷ್​ ಮಾಡಿ ಮಜ್ಜನ ಮಾಡಿಸಬೇಕು, ಮಲಗಲು ಮೆತ್ತನೆ ಹಾಸಿಗೆಯೂ ಬೇಕು.

ಇಂತಹ ಅಪರೂಪದ ಹೋರಿಗಳನ್ನು ರಾಜ್ಯದಲ್ಲಿ ಮತ್ತೆಲ್ಲೂ ನಾವು ನೋಡಲು ಸಾಧ್ಯವಿಲ್ಲ. ಬಣ್ಣ, ಎತ್ತರ, ಕೂಡು, ಬಾಲ, ಕಾಲು ಸೇರಿ ದೇಹದ ಎಲ್ಲ ಭಾಗದಲ್ಲಿಯೂ ಶುದ್ಧತೆ ಹೊಂದಿರುವ ಹೋರಿಗಳು 15 ಲಕ್ಷ ರೂ.ಗೆ ಮಾರಾಟವಾಗಿರುವುದು ದಾಖಲೆಯಾಗಿದೆ. ಮನೆಯ ಮುಂದೆ ಇಂತಹ ಹೋರಿಗಳಿದ್ದರೆ ನಮಗೆ ಶ್ರೇಯಸ್ಸು. ಕಳೆದ 11 ತಿಂಗಳು ಪ್ರೀತಿಯಿಂದ ಸಾಕಿ, ಮನೆಯಲ್ಲಿ ಮೇಯ್ದ ಹೋರಿಗಳನ್ನು ಮಾರಾಟ ಮಾಡಿದ ನಂತರ ಅವುಗಳ ಕೊರತೆ ಕಾಡುತ್ತಿದೆ. ಹಾಗಾಗಿ, ಮತ್ತೊಂದು ಜೋಡಿ ಕರುಗಳನ್ನು 4.20 ಲಕ್ಷ ರೂ. ಕೊಟ್ಟು ತಂದು ಕಟ್ಟಿದ್ದೇನೆ.

| ಪಾಪಣ್ಣ ಹಳ್ಳಿಕಾರ್​ ಹೋರಿಯ ಮಾಲೀಕ