ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ನಾಗರಾಜ ಸಂಗಮ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲ್ಲ ತಾಲೂಕುಗಳಲ್ಲಿ, ತಾಲೂಕು ಮಟ್ಟದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘಗಳು ಅಸ್ತಿತ್ವದಲ್ಲಿವೆ. ಆದರೆ, ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ನಿವೃತ್ತಿ ನೌಕರರ ಸಂಘ ಮಾತ್ರವಿದ್ದು, ಚಿತ್ರದುರ್ಗ ತಾಲೂಕು ನಿವೃತ್ತ ನೌಕರರ ಸಂಘ ಅಸ್ತಿತ್ವದಲ್ಲಿ ಇರಲಿಲ್ಲ ಎಂದರು.
ತಾಲೂಕಿನ ನಿವೃತ್ತ ನೌಕರರ ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಬಗೆಹರಿಸಲು ಸಂಘ ಹಾಗೂ ಮನೋರಂಜನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳ, ನಿಗಮ, ಮಂಡಳಿ, ಪ್ರಾಧಿಕಾರಗಳ ನಿವೃತ್ತ ನೌಕರರ ಸಂಘದ ಸದಸ್ಯತ್ವ ಪಡೆಯಬಹುದು. ಪಿಂಚಣಿ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗಲಿರುವ ಸಂಘ, ವಾರ್ಷಿಕ ಎರಡು ಬಾರಿ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರಗಳನ್ನು ಏರ್ಪಡಿಸಲಿದೆ ಎಂದರು.
ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಅವರು ಸಂಘಕ್ಕೆ ಜೂ.15 ರಂದು ಚಾಲನೆ ನೀಡಲಿದ್ದಾರೆ. ಮುಖ್ಯಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಸಂಸದ ಗೋವಿಂದ ಎಂ. ಕಾರಜೋಳ, ಎಂಎಲ್‌ಸಿ ಕೆ.ಎಸ್. ನವೀನ್, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಡಿವೈಎಸ್‌ಪಿ ಪಿ.ಕೆ. ದಿನಕರ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.
ಸಮಾರಂಭದಲ್ಲಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪಿ.ಎನ್. ಶ್ರೇಯಾ ಹಾಗೂ ಡಿ.ವಿ. ವರಣ್‌ವಂಶಿ ಅವರನ್ನು ಗೌರವಿಸಲಾಗುವುದು ಎಂದರು.
ಸಂಘದ ಅಧ್ಯಕ್ಷ ಬಿ.ಕೆ. ಹನುಮಂತಪ್ಪ, ಕಾರ್ಯಾಧ್ಯಕ್ಷ ಎಚ್. ಗೋವಿಂದಯ್ಯ, ಪದಾಧಿಕಾರಿಗಳಾದ ಎಚ್.ಪರಮೇಶ್ವರಪ್ಪ, ಎಂ.ಜಿ. ಸೂರ್ಯ ನಾರಾಯಣ್, ಒ. ಮಾದಯ್ಯ, ಪ್ರೇಮಾ, ಚಿನ್ನಪ್ಪ, ಕೃಷ್ಣಮೂರ್ತಿ, ಪಿ.ಎಸ್. ಶಿವಕುಮಾರ್, ಎ. ತಿಪ್ಪೇಸ್ವಾಮಿ, ಎಸ್. ಹಾಲಾನಾಯ್ಕ ಇತರರು ಇದ್ದರು.