ನಾಗಮಂಗಲ: ಬಗರ್‌ಹುಕುಂ ಸಮಿತಿ ರಚನೆಯಾಗಿ 2 ವರ್ಷ ಕಳೆದರೂ ಕಡತ ಸಿದ್ಧಪಡಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದೀರಿ. 15 ದಿನದೊಳಗೆ ರೈತರ ಕಡತಗಳು ಸಂಪೂರ್ಣವಾಗಿ ಸಿದ್ಧವಾಗದಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಸುರೇಶ್‌ಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬಗರ್‌ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಂಡಿಗನವಿಲೆ ಹಾಗೂ ಹೊಣಕೆರೆ ಹೋಬಳಿ ವ್ಯಾಪ್ತಿಯ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಇದ್ದು, ಅವುಗಳಿಗೆ ಸಂಬಂಧಿಸಿದ ಕಡತಗಳನ್ನು ಸಿದ್ಧಪಡಿಸಿ ಮುಂದಿನ ಸಭೆಗೆ ಸಲ್ಲಿಸಬೇಕು. ಉಳಿದಂತೆ ತಕರಾರು ಸಲ್ಲಿಕೆಯಾಗಿದ್ದ ಕೆಲವು ಪ್ರಕರಣಗಳನ್ನು ಸಮಿತಿ ಸದಸ್ಯರು ಇತ್ಯರ್ಥಪಡಿಸಿದ್ದು, ಅವುಗಳಿಗೆ ಸಂಬಂಧಿಸಿದ ಕಡತಗಳನ್ನು ಸಿದ್ಧಪಡಿಸಿ ಎಂದು ಸೂಚಿಸಿದರು.
ಫಾರ್ಮ್ 53ರ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳಿಗೂ ಸಂಬಂಧಿಸಿದ ದಾಖಲೆಗಳನ್ನು ಸೇರಿಸಿ ಕಡತಗಳನ್ನು ಸಮಿತಿಗೆ ಸಲ್ಲಿಸುವುದು ಅಧಿಕಾರಿಗಳ ಕರ್ತವ್ಯ. ತದನಂತರದಲ್ಲಿ ಸಮಿತಿ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಮಾಡಲಿದೆ ಆದರೆ ಅಧಿಕಾರಿಗಳು ರೈತರಿಗೆ ಇಲ್ಲದ ಕಾರಣ ನೀಡಿ ಗೊಂದಲಕ್ಕೀಡು ಮಾಡುವುದು ಬೇಡ. ನ.29ರಂದು ನಡೆಯುವ ಸಭೆಗೆ ಅರ್ಜಿಗಳಿಗೆ ಸಂಬಂಧಿಸಿದ ಕಡತಗಳನ್ನು ಸಲ್ಲಿಸಲು ಕೊನೆಯ ಅವಕಾಶವಾಗಿದ್ದು, ತದನಂತರದಲ್ಲಿ ತಂದರೆ ಸ್ವೀಕರಿಸುವುದಿಲ್ಲ ಎಂದರು.
ಗ್ರಾಮ ಲೆಕ್ಕಾಧಿಕಾರಿಗಳಿಂದ ಅರ್ಜಿಗಳಿಗೆ ಸಂಬಂಧಿಸಿದ ಕಡತಗಳನ್ನು ಶಾಸಕರು ವೃತ್ತವಾರು ಪರಿಶೀಲನೆ ನಡೆಸಿದರು. ಸಮಿತಿಗೆ ಸಲ್ಲಿಕೆಯಾದ ಕಡತಗಳನ್ನು ಮತ್ತೆ ಯಾವ ಅಧಿಕಾರಿಗೂ ಹಿಂದಕ್ಕೆ ನೀಡಬಾರದು. ಕಡತಗಳನ್ನು ಸಮಿತಿಗೆ ಸಲ್ಲಿಸಿದ ನಂತರ ಇತರ ಅಧಿಕಾರಿಗೆ ಹಿಂದಕ್ಕೆ ನೀಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಪಟ್ಟಣ ಪಂಚಾಯಿತಿ ಮತ್ತು ಪುರಸಭೆ ವ್ಯಾಪ್ತಿಗೆ ಹೊಸದಾಗಿ ಸೇರಿರುವ ಗ್ರಾಮಗಳ ರೈತರು ಸಲ್ಲಿಸಿರುವ ಫಾರಂ 53ರ ಅರ್ಜಿಗಳಿಗೆ ಕಡತ ತಯಾರಿಸಿ, ಆದರೆ ಸರ್ಕಾರದ ಆದೇಶದ ನಂತರ ಅವುಗಳನ್ನು ತೀರ್ಮಾನಿಸೋಣ ಎಂದರು.
ಹಣ ಪಡೆದರೆ ಸಸ್ಪೆಂಡ್: ವೃತ್ತವಾರು ಸರ್ವೇಯರ್‌ಗಳನ್ನು ಹಂಚಿಕೆ ಮಾಡಿ ನಿಯೋಜಿಸಿ 8 ತಿಂಗಳು ಕಳೆದರೂ ಸರ್ವೇಯಾಗಿಲ್ಲ. ಸರ್ವೇಯರ್‌ಗಳು ರೈತರಿಂದ ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಯಾರಾದರೂ ಹಣ ಪಡೆದರೆ ಸಸ್ಪೆಂಡ್ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ತಹಸೀಲ್ದಾರ್ ನಂದೀಶ್, ಸಮಿತಿ ಸದಸ್ಯರಾದ ನರಸಿಂಹಮೂರ್ತಿ ಹಾಗೂ ಅನುರಾಧಾ ಇದ್ದರು.