ಜಿಲ್ಲೆ

ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖದೀಮರ ಬಂಧನ

ಹಾಸನ: ತಿಂಗಳಿಗೆ 15 ಸಾವಿರ ರೂ. ಸಂಬಳ ನೀಡುವುದಾಗಿ ಒಪ್ಪಿ ಜಮೀನು ಕೆಲಸಕ್ಕೆ ಸೇರಿಸಿಕೊಂಡಿದ್ದ ಅನ್ನದಾತನ ಮನೆಗೆ ಕನ್ನ ಹಾಕಿದ ಉತ್ತರ ಕರ್ನಾಟಕದ ಇಬ್ಬರನ್ನು ಅರಕಲಗೂಡು ಪೊಲೀಸರು ಬಂಧಿಸಿದ್ದಾರೆ.

ಧಾರವಾಡದ ಅಂಬೇಡ್ಕರ್ ನಗರ ನಿವಾಸಿ ಬಾಬು ಚೌವಾಣ್ (40) ಹಾಗೂ ಗದಗ ಜಿಲ್ಲೆ ಚನ್ನಪಟ್ಟಣ ಗ್ರಾಮದ ಹುಲಿಗಪ್ಪ ವಡ್ಡರ್ (32) ಬಂಧಿತರು.
ಅರಕಲಗೂಡು ತಾಲೂಕು ರಂಗಾಪುರ ಗ್ರಾಮದ ಎಂ. ಶಿವಲಿಂಗಯ್ಯ ಎಂಬುವರು ಜಮೀನು ಕೆಲಸಕ್ಕೆ ಕಾರ್ಮಿಕರು ಬೇಕಿದ್ದಾರೆ ಎಂದು ಹೇಳಿದ್ದರಿಂದ ಪಕ್ಕದ ಮನೆಯ ರಘು ಎಂಬುವರು ಹುಲಿಗಪ್ಪ ಹಾಗೂ ಬಾಬು ಅವರನ್ನು ಕರೆಸಿದ್ದರು.

ತಿಂಗಳಿಗೆ 15 ಸಾವಿರ ರೂ. ವೇತನ ನೀಡುವುದಾಗಿ ಹೇಳಿದ್ದ ಶಿವಲಿಂಗಯ್ಯ ವಾಸ್ತವ್ಯಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೆ ಕೆಲಸಕ್ಕೆ ಸೇರಿದ ಒಂದು ತಿಂಗಳ ಒಳಗೆ ಮನೆ ಬೀಗ ಮುರಿದು 25 ಗ್ರಾಂ ತೂಕದ ಚಿನ್ನದ ನಕ್ಲೇಸ್, 25 ಗ್ರಾಂ ಚಿನ್ನದ ಸರ, 6 ಗ್ರಾಂ ಉಂಗುರ, 4 ರೇಷ್ಮೆ ಸೀರೆ, 25 ಸಾವಿರ ರೂ. ನಗದು, ಒಂದು ಬೈಕ್ ಸೇರಿ 3 ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವು ಮಾಡಿದ್ದರು.

ಫೆ. 23 ರಂದು ಸಂಬಂಧಿಕರ ಪುತ್ರಿಯ ಮದುವೆ ನಿಮಿತ್ತ ಶಿವಲಿಂಗಯ್ಯ ಕುಟುಂಬ ಸಮೇತ ಕುಶಾಲ ನಗರಕ್ಕೆ ತೆರಳಿದ್ದರು. ಈ ಸಮಯಕ್ಕಾಗಿಯೇ ಕಾಯುತ್ತಿದ್ದ ಕಾರ್ಮಿಕರು ರಾತ್ರಿ 10 ಗಂಟೆ ಹೊತ್ತಿಗೆ ಮನೆಯ ಬಾಗಿಲನ್ನು ಬಲವಾಧ ಆಯುಧದಿಂದ ಮೀಟಿ ಒಳ ಪ್ರವೇಶಿಸಿದ್ದಾರೆ. ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಎಲ್ಲ ದೋಚಿ ಪರಾರಿಯಾಗಿದ್ದರು.