ಜಿಲ್ಲೆ

ಅಪರಿಚಿತ ಮಹಿಳೆಯಿಂದ 15 ಸಾವಿರ ರೂ. ಡ್ರಾ

Avinash R

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಕೊಕ್ಕಡದ ಕೆನರಾ ಬ್ಯಾಂಕ್ ಕಳೆದ 6 ತಿಂಗಳಿನಿಂದ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದು, ಅ.21ರಂದು ಬ್ಯಾಂಕಿಗೆ ಬಂದ ಅಪರಿಚಿತ ಮಹಿಳೆಯೋರ್ವರು ಬೇರೊಬ್ಬ ಮಹಿಳೆಯ ಬ್ಯಾಂಕ್ ಖಾತೆಯಿಂದ 15 ಸಾವಿರ ರೂ. ಹಣವನ್ನು ಡ್ರಾ ಮಾಡಿಕೊಂಡು ಹೋದ ಪ್ರಕರಣ ಬೆಳಕಿಗೆ ಬಂದಿದೆ.

ಕೊಕ್ಕಡದ ಕೆಂಗುಡೇಲು ನಿವಾಸಿ ಮೋಹಿನಿ ಕಳೆದ ಸುಮಾರು 20 ವರ್ಷಗಳಿಂದ ಕೊಕ್ಕಡ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಅವರ ಖಾತೆಯಲ್ಲಿ 16 ಸಾವಿರ ರೂ. ಇದ್ದು, ಅ.21ರಂದು ಅವರು ಪುತ್ರ ಗಿರೀಶ್ ಜತೆ ಬ್ಯಾಂಕ್‌ಗೆ ಬಂದು ಖಾತೆಯಿಂದ 2 ಸಾವಿರ ತೆಗೆಯಲು ಹೇಳಿದಾಗ ಅವರ ಖಾತೆಯನ್ನು ಪರಿಶೀಲಿಸಿದ ಬ್ಯಾಂಕ್ ನೌಕರ ನಿಮ್ಮ ಖಾತೆಯಲ್ಲಿ 1 ಸಾವಿರ ರೂ. ಮಾತ್ರ ಇದೆ ಎಂದು ತಿಳಿಸಿದರು. ಇಲ್ಲ ನನ್ನ ಖಾತೆಯಲ್ಲಿ 16 ಸಾವಿರ ಇತ್ತು ಎಂದು ಮೋಹಿನಿ ವಾದಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಬ್ಯಾಂಕ್‌ನಲ್ಲಿ ಇದ್ದ ಸಿಸಿಟಿವಿಯನ್ನು ಗಿರೀಶ್ ಪರಿಶೀಲಿಸುವಂತೆ ಸಿಬ್ಬಂದಿಯನ್ನು ಪಟ್ಟುಹಿಡಿದರು. 21ರಂದು ಬೆಳಗ್ಗೆ 10.50ಕ್ಕೆ ಅಪರಿಚಿತ ಮಹಿಳೆಯೊಬ್ಬರು ಬಂದು ಮೋಹಿನಿ ಅವರ ಖಾತೆಯಿಂದ 15 ಸಾವಿರ ರೂ. ಡ್ರಾ ಮಾಡಿದ್ದರು. ಮೋಹಿನಿ ಅವರು ಕಷ್ಟಪಟ್ಟು ಸಹಿ ಮಾಡುತ್ತಿದ್ದು, ಅಪರಿಚಿತ ಮಹಿಳೆ ಕೂಡಾ ಮೊದಲ ಎರಡು ಅಕ್ಷರನ್ನು ಸರಿಯಾಗಿ ಬರೆದು ಸಹಿ ಮಾಡಿರುವುದು ಬ್ಯಾಂಕ್‌ನ ಸ್ಲಿಪ್‌ನಲ್ಲಿ ಕಂಡು ಬಂದಿದೆ. ಮಹಿಳೆ ಬಂದು ಹಣ ಪಡೆದುಕೊಂಡು ಹೋಗಿರುವುದು ಸಿಸಿ ಟಿವಿಯಲ್ಲಿ ದೃಢಪಟ್ಟಿದೆ. ಆದರೆ ಮಹಿಳೆಯ ಮುಖಚರ್ಯೆ ಸಿಸಿ ಕ್ಯಾಮರದಲ್ಲಿ ಸರಿಯಾಗಿ ದಾಖಲಾಗಿಲ್ಲ ಎನ್ನಲಾಗಿದೆ. ಈ ವಿಷಯವನ್ನು ಬ್ಯಾಂಕ್ ಮ್ಯಾನೇಜರ್ ಗಮನಕ್ಕೆ ತಂದಾಗ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಆದರೆ ನನಗೆ ಇಂದೇ ಹಣ ಬೇಕು ಎಂದು ಮೋಹಿನಿ ಹಾಗೂ ಅವರ ಪುತ್ರ ಗಿರೀಶ್ ಹಠ ಹಿಡಿದು ಸಂಜೆ ಗಂಟೆ 6.15ರ ತನಕ ಬ್ಯಾಂಕ್‌ನಲ್ಲೇ ಕುಳಿತ್ತಿದ್ದರು. ಸಂಜೆ ಬ್ಯಾಂಕ್ ಮ್ಯಾನೇಜರ್ ನಾಳೆ ಬರುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಮರುದಿನ ಮೋಹಿನಿ ಬ್ಯಾಂಕ್‌ಗೆ ಹೋದಾಗ ಅವರ ಖಾತೆಗೆ ರೂ. 15 ಸಾವಿರ ಜಮೆ ಮಾಡಲಾಗಿದೆ. ಇದನ್ನು ಬ್ಯಾಂಕ್ ಸಿಬ್ಬಂದಿ ನೀಡುವುದಾಗಿ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಮೋಹಿನಿ ಅವರ ಬ್ಯಾಂಕ್ ಪಾಸ್ ಪುಸ್ತಕ ಕೆಲ ಸಮಯಗಳ ಹಿಂದೆ ಕಳೆದು ಹೋಗಿದ್ದು, ಅವರು ಬ್ಯಾಂಕ್‌ಗೆ ಬಂದು ಹೊಸ ಪಾಸ್ ಪುಸ್ತಕ ಪಡೆದಿದ್ದರು. ಕಳೆದುಕೊಂಡ ಪಾಸ್ ಪುಸ್ತಕ ಯಾರಿಗೋ ದೊರೆತು, ಅವರು ಈ ಅಪರಿಚಿತ ಮಹಿಳೆ ಮೂಲಕ ಫೋರ್ಜರಿ ಸಹಿ ಹಾಕಿ ಹಣ ಡ್ರಾ ಮಾಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.