ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 623 ಕೋಟಿ ರೂ.ಗಿಂತ ಅಧಿಕ ವ್ಯವಹಾರ ನಡೆಸಿದ್ದು 2 ಕೋಟಿ ರೂ.ಗಿಂತ ಅಧಿಕ ಲಾಭಗಳಿಸಿದೆ. ಸದಸ್ಯರಿಗೆ ಶೇ.15 ದಂತೆ ಡಿವಿಡೆಂಡ್ ನೀಡಲು ನಿರ್ಣಯಿಸಲಾಗಿದೆ ಎಂದು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನೂಜಿ ಜನಾರ್ದನ ಗೌಡ ಹೇಳಿದರು.
ಶನಿವಾರ ಮುಂಡಾಜೆಯ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಭಾರ್ಗವ ಸಭಾಭವನದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಮಾತನಾಡಿ, 6,023 ಎ ತರಗತಿ ಸದಸ್ಯರು, 8,321 ಸಿ ಮತ್ತು ಡಿ ವರ್ಗದ ಸದಸ್ಯರಿದ್ದು 7.21 ಕೋಟಿ ರೂ.ಪಾಲು ಬಂಡವಾಳ ಹೊಂದಿದೆ. 72 ಕೋಟಿ ರೂ.ಗಿಂತ ಅಧಿಕ ಠೇವಣಿ ಸಂಗ್ರಹವಿದ್ದು 100 ಕೋಟಿ ರೂ.ಗಿಂತ ಅಧಿಕ ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಸಂಘ ಶೇ.100 ಸಾಲ ವಸೂಲಿ ಮಾಡುತ್ತಿದ್ದು, ಜಿಲ್ಲಾ ಸಹಕಾರಿ ಬ್ಯಾಂಕ್‌ನ ಪ್ರಶಸ್ತಿಗೆ ಪಾತ್ರವಾಗಿದೆ. ಸಂಘವು ಯಂತ್ರೋಪಕರಣ ಮಳಿಗೆ ಆರಂಭಿಸಿದ್ದು ಸದಸ್ಯರಿಗೆ ಪ್ರಯೋಜನ ನೀಡಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ವಾಸ್ತವ್ಯದ ಮನೆ ಹಾಗೂ ಮಿನಿಹಾಲ್ ನಿರ್ಮಿಸಿದೆ ಎಂದರು.
ಮಹಾಸಭೆ ನೋಟಿಸಿನಲ್ಲಿ ಸವಿವರವಾದ ಲೆಕ್ಕಪತ್ರ ನೀಡಿದ ಕುರಿತು ಸದಸ್ಯರಾದ ವೆಂಕಟೇಶ್ವರ ಭಟ್, ನಾಮದೇವ ರಾವ್, ರೆಹಮಾನ್, ಬಾಬು ಪೂಜಾರಿ ಮತ್ತಿತರರು ಪ್ರಸ್ತಾವಿಸಿದರು. ನೋಟಿಸಿನ ಖರ್ಚು-ವೆಚ್ಚ ಅಧಿಕವಾಗುವ ಕಾರಣ ಇದನ್ನು ನೀಡಿಲ್ಲ, ಅಗತ್ಯ ಇರುವ ಸದಸ್ಯರು ಸಂಘದಿಂದ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ವರ್ಷದಿಂದ ನೋಟಿಸಿನ ಜತೆ ನೀಡಲು ಕ್ರಮ ಕೈಗೊಳ್ಳುವುದಾಗಿ ನಿರ್ಣಯಿಸಲಾಯಿತು.
ಉಪಾಧ್ಯಕ್ಷ ಪ್ರಕಾಶ ನಾರಾಯಣ ಸ್ವಾಗತಿಸಿದರು. ಶಾಖಾ ಪ್ರಬಂಧಕ ಪ್ರಸನ್ನ ಪರಾಂಜಪೆ, ಆಂತರಿಕ ಲೆಕ್ಕಪರಿಶೋಧಕ ನಾರಾಯಣ ಫಡಕೆ ನಿರೂಪಿಸಿದರು. ನಿರ್ದೇಶಕರು ಉಪಸ್ಥಿತರಿದ್ದರು.