ಸಿಮ್ಸ್ ಆವರಣದಲ್ಲಿ ಕಳ್ಳತನ ಆಗಿದ್ದ ವಿದ್ಯುತ್ ಕಂಬಗಳನ್ನು ವಾಪಸ್ ತಂದಿಟ್ಟಿರುವುದು.  
ಜಿಲ್ಲೆ

ಸಿಮ್ಸ್‌ನಲ್ಲಿ ರಾತ್ರೋರಾತ್ರಿ 15 ವಿದ್ಯುತ್ ಕಂಬ ಕಳ್ಳತನ

ಶಿವಮೊಗ್ಗ: ಸಿಮ್ಸ್(ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ)ನಲ್ಲಿ ಲಕ್ಷಾಂತರ ರೂ. ಮೌಲ್ಯದ 15 ವಿದ್ಯುತ್ ಕಂಬಗಳನ್ನು ಕಳ್ಳತನ ಮಾಡಲಾಗಿದೆ. ತನಿಖೆಗೆ ಆದೇಶವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಳ್ಳತನ ಮಾಡಿದ್ದ ನೌಕರನೇ ತಪ್ಪೊಪ್ಪಿಕೊಂಡು ಆರು ವಿದ್ಯುತ್ ಕಂಬಗಳನ್ನು ವಾಪಸ್ ತಂದಿಟ್ಟಿರುವುದು ಬೆಳಕಿಗೆ ಬಂದಿದೆ.

ಸಿಮ್ಸ್‌ನ ಕಾಯಂ ಎಲೆಕ್ಟ್ರೀಶಿಯನ್ ಹಾಗೂ ಗುತ್ತಿಗೆ ಎಲೆಕ್ಟ್ರೀಶಿಯನ್ ಸೇರಿಕೊಂಡು 15 ಕಬ್ಬಿಣದ ಕಂಬಗಳನ್ನು ರಾತ್ರೋರಾತ್ರಿ ಎಗರಿಸಿದ್ದರು. ಕಳ್ಳತನ ಮಾಡಿರುವ ವಿಚಾರ ಸಿಮ್ಸ್‌ನಲ್ಲಿ ಹಬ್ಬುತ್ತಿದ್ದಂತೆ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರು ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಜಿಲ್ಲಾ ವೈದ್ಯಕೀಯ ಅಧೀಕ್ಷಕರ ನೇತೃತ್ವದಲ್ಲಿ ಆತಂರಿಕ ತನಿಖೆಗೆ ಆದೇಶಿಸಿದ್ದರು.

ತನಿಖೆ ವಿಚಾರ ತಿಳಿದ ಕೂಡಲೇ ಕಾಯಂ ಎಲೆಕ್ಟ್ರೀಶಿಯನ್ ಆರು ವಿದ್ಯುತ್ ಕಂಬಗಳನ್ನು ಕಳವು ಮಾಡಿದ್ದ ಜಾಗಕ್ಕೆ ತಂದಿರಿಸಿದ್ದಾರೆ. ಆದರೆ ಉಳಿದ ವಿದ್ಯುತ್ ಕಂಬಗಳನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರು, 10ರಿಂದ 15 ವಿದ್ಯುತ್ ಕಂಬ ಕಳ್ಳತನ ಆಗಿದ್ದವು. ಎಲೆಕ್ಟ್ರೀಶಿಯನ್ ಕೊಂಡೊಯ್ದ ಕಂಬಗಳನ್ನು ವಾಪಸ್ ತಂದಿಟ್ಟಿದ್ದಾರೆ. ಆದರೂ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಸರ್ಜನ್ ಮತ್ತು ವೈದ್ಯಕೀಯ ಅಧೀಕ್ಷಕರಿಗೆ ಸೂಚಿಸಲಾಗಿದೆ ಎಂದರು.

ಏನಿದು ಪ್ರಕರಣ ?

ಸಿಮ್ಸ್ ಆವರಣದಲ್ಲಿ ಇತ್ತೀಚೆಗೆ 15 ವಿದ್ಯುತ್ ಕಂಬಗಳನ್ನು ತಂದಿರಿಸಲಾಗಿತ್ತು. ಕಳೆದ ಬುಧವಾರ ಕಾಯಂ ಎಲೆಕ್ಟ್ರೀಶಿಯನ್ ರಾತ್ರೋರಾತ್ರಿ 6 ವಿದ್ಯುತ್ ಕಂಬಗಳನ್ನು ತೆಗೆದುಕೊಂಡು ಹೋಗಿದ್ದರು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಎಲೆಕ್ಟ್ರೀಶಿಯನ್ ಕಳೆದ ಶನಿವಾರ ರಾತ್ರಿ ಉಳಿದ 9 ವಿದ್ಯುತ್ ಕಂಬಗಳನ್ನು ತೆಗೆದುಕೊಂಡು ಹೋಗಿದ್ದರು. ಅನುಮತಿ ಪಡೆಯದೇ ಇಬ್ಬರೂ ಸೇರಿ 15 ವಿದ್ಯುತ್ ಕಂಬಗಳನ್ನು ಕೊಂಡೊಯ್ದಿದ್ದರು. ಈ ವಿಚಾರ ಸಿಮ್ಸ್ ನಿರ್ದೇಶಕರ ಗಮನಕ್ಕೆ ಬಂದಿದ್ದು ತನಿಖೆಗೆ ಆದೇಶಿಸಿದ್ದರು.