ವಿಜಯವಾಣಿ ಸುದ್ದಿಜಾಲ ಬೈಂದೂರು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಸಾರ್ವಜನಿಕ ಸೇವೆಯಲ್ಲಿ ಸುದೀರ್ಘಕಾಲ ಗುರುತಿಸಿಕೊಂಡಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 1140 ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸಿದ್ದು, 6.15 ಕೋಟಿ ರೂ. ಲಾಭಗಳಿಸಿದೆಲ. ಸದಸ್ಯರಿಗೆ ಶೇ.15 ಡೆವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಘೋಷಿಸಿದರು. ಉಪ್ಪುಂದ ದುರ್ಗಾಪರಮೇಶ್ವರೀ ಸಭಾಂಗಣದಲ್ಲಿ ಭಾನುವಾರ ನಡೆದ 2024-25ನೇ ಸಾಲಿನ 48ನೇ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ರೈತರು ಹಾಗೂ ಗ್ರಾಹಕರ ಸೇವೆಯಲ್ಲಿ ಜನ ಮನ್ನಣೆ ಪಡೆದು ಸಹಕಾರಿ ರಂಗದಲ್ಲಿ ವಿಶಿಷ್ಠ ವಿನೂತನ ಸಾಧನೆಯಿಂದ ಮನೆಮಾತಾಗಿದೆ. 23 ವರ್ಷಗಳಿಂದ ಸತತವಾಗಿ ಎ ಗ್ರೇಡ್ ಹೊಂದಿದ್ದು, ಸರ್ವಾಂಗೀಣ ನಿರ್ವಹಣೆಗೆ ಪ್ರಸಕ್ತ ವರ್ಷ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಿಂದ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಸ್ವೀಕರಿಸಿದೆ. ಜತೆಗೆ ಸಂಘವು ಪ್ರಾಯೋಜಿಸಿರುವ ರೈತಸಿರಿ ರೈತಸೇವಾ ಒಕ್ಕೂಟಕ್ಕೆ ಜಿಲ್ಲಾಮಟ್ಟದ ಪ್ರಶಸ್ತಿ ದೊರೆತಿದೆ ಎಂದರು. ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಮಂಜು ದೇವಾಡಿಗ, ನಿರ್ದೇಶಕರಾದ ಈಶ್ವರ ಹಕ್ಲತೋಡು, ಮೋಹನ ಪೂಜಾರಿ, ಬಿ.ಎಸ್.ಸುರೇಶ ಶೆಟ್ಟಿ, ಗುರುರಾಜ್ ಹೆಬ್ಬಾರ್, ಭರತ್ ದೇವಾಡಿಗ, ಹೂವ ನಾಯ್ಕ, ಪ್ರಕಾಶ ಪೂಜಾರಿ, ರಾಜೇಶ ದೇವಾಡಿಗ, ಉದಯಕುಮಾರ್ ಶೆಟ್ಟಿ, ದಿನಿತಾ ಶೆಟ್ಟಿ, ಲೀಲಾ ಪೂಜಾರಿ, ರಂಜಿತ್‌ಕುಮಾರ್ ಶೆಟ್ಟಿ ಇದ್ದರು. ಹಿರಿಯ ವ್ಯವಸ್ಥಾಪಕ ಚಂದಯ್ಯ ಶೆಟ್ಟಿ ವಂದಿಸಿದರು. ಸಂಘದ ಸಿಇಒ ವಿಷ್ಣು ಆರ್. ಪೈ ಕಾರ್ಯಕ್ರಮ ನಿರೂಪಿಸಿದರು.
ಸಂಘವು ಗಳಿಸಿದ ಲಾಭಾಂಶದಲ್ಲಿ ಕಾರ್ಯವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸರ್ಕಾರಿ ಶಾಲೆಗಳ ಗೌರವ ಶಿಕ್ಷಕರಿಗೆ ಗೌರವಧನ, ಬೇಡಿಕೆಯಂತೆ ಮೂಲಸೌಕರ್ಯಗಳಿಗೆ ಸಹಾಯಧನ ನೀಡುತ್ತಿದ್ದೇವೆ. ಸಹಕಾರ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದವರನ್ನು ಸನ್ಮಾನಿಸಲಾಗುತ್ತಿದೆ. ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ನೆಲೆಯಲ್ಲಿ ಜರುಗುವ ಕಾರ್ಯಕ್ರಮಗಳಿಗೆ ನಿರಂತರ ಸಹಾಯ ಮಾಡುತ್ತಾ ಬಂದಿರುತ್ತೇವೆ. ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷ, ಖಂಬದಕೋಣೆ ರೈತ ಸೇವಾ ಸಂಘ