ಕುಷ್ಟಗಿಯ 5ನೇ ವಾರ್ಡ್ ನಿವಾಸಿಗಳು ಪುರಸಭೆ ಸದಸ್ಯ ನಾಗರಾಜ್ ಹಿರೇಮಠ ಮನೆ ಎದುರು ಖಾಲಿ ಕೊಡಗಳೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದರು. 
ಜಿಲ್ಲೆ

15 ದಿನಗಳಿಂದ ನೀರು ಪೂರೈಕೆ ಸ್ಥಗಿತ: ಕುಷ್ಟಗಿ ಪುರಸಭೆ ಸದಸ್ಯನ ಮನೆ ಮುಂದೆ ನಿವಾಸಿಗಳ ಪ್ರತಿಭಟನೆ

ಕುಷ್ಟಗಿ: ಕುಡಿವ ನೀರಿನ ಸಮಸ್ಯೆಗೆ ಬೇಸತ್ತ ಪಟ್ಟಣದ 5ನೇ ವಾರ್ಡ್‌ನ ನಿವಾಸಿಗಳು ಸೋಮವಾರ ಖಾಲಿ ಕೊಡಗಳೊಂದಿಗೆ ವಾರ್ಡ್ ಸದಸ್ಯ ನಾಗರಾಜ್ ಹಿರೇಮಠ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ಕಳೆದ 15 ದಿನಗಳಿಂದ ಕುಡಿವ ನೀರು ಪೂರೈಕೆ ಸ್ಥಗಿತಗೊಂಡಿದೆ. ಬೀದಿದೀಪ, ನೈರ್ಮಲ್ಯ ಸಮಸ್ಯೆಯೂ ಹೆಚ್ಚಿದೆ. ಈ ಬಗ್ಗೆ ವಾರ್ಡ್ ಸದಸ್ಯರ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಪುರಸಭೆ ಅಧಿಕಾರಿಗಳು ನಮ್ಮ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿದರು. ಶೀಘ್ರವೇ ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ವಾರ್ಡ್ ನಿವಾಸಿಗಳಾದ ನಾಗರಾಜ್ ಬನ್ನಿಗೋಳ, ಜಂಬಣ್ಣ ಬೂದರ್, ಯಲ್ಲಪ್ಪ ವಗ್ಗರ್, ಮಂಜುನಾಥ್ ಗದ್ದಿ, ರಾಮಪ್ಪ ಬನ್ನಿಗೋಳ, ದುರುಗಪ್ಪ ಕಟ್ಟಿಹೊಲ ಹಾಗೂ ಮಹಿಳೆಯರಿದ್ದರು.

ವಾರ್ಡ್‌ಗೆ ದಿನದ 24 ತಾಸು ನೀರು ಪೂರೈಸುವ ಕಾರ್ಯ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ. ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ.| ನಾಗರಾಜ್ ಹಿರೇಮಠ, 5ನೇ ವಾರ್ಡ್ ಸದಸ್ಯ, ಕುಷ್ಟಗಿ