ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯಲ್ಲಿ 134 ಪೌರಕಾರ್ಮಿಕರ ನೇರ ನೇಮಕಾತಿ ಸೇರಿ ವಿವಿಧ ಬೇಡಿಕೆಗಳನ್ನು 15 ದಿನಗಳಲ್ಲಿ ಈಡೇರಿಸಬೇಕು. ಇಲ್ಲದಿದ್ದರೆ ಅವಳಿ ನಗರದಲ್ಲಿ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಎಚ್ಚರಿಕೆ ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 134 ಪೌರ ಕಾರ್ಮಿಕರನ್ನು ನೇರನೇಮಕಾತಿ ಮಾಡಿಕೊಳ್ಳಬೇಕು ಎಂದು ಸರ್ಕಾರ 2017ರಲ್ಲಿ ಆದೇಶ ಹೊರಡಿಸಿದೆ. ಆದರೆ, ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಅನಗತ್ಯವಾಗಿ ಪಾಲಿಕೆ ಆಡಳಿತ ವಿಳಂಬ ಮಾಡುವ ಮೂಲಕ ಪೌರಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಪಾಲಿಕೆಯಲ್ಲಿ ಖಾಲಿಯಿರುವ 340 ಪೌರಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಗುತ್ತಿಗೆ ಪೌರಕಾರ್ಮಿಕರ ಪಟ್ಟಿಯಲ್ಲಿರುವ ನಕಲಿ ಪೌರಕಾರ್ಮಿಕರ ಹೆಸರನ್ನು ಕೈ ಬಿಡಬೇಕು. ಸಾಮಾನ್ಯ ಸಭೆಯ ಠರಾವಿನಂತೆ ಪಾಲಿಕೆ ಆವರಣದಲ್ಲಿ ಪೌರಕಾರ್ಮಿಕರ ಸಂಘಕ್ಕೆ ಕೊಠಡಿ ನೀಡುವುದು, ಕನಿಷ್ಠ ವೇತನ ಬಾಕಿ ಪಾವತಿ, ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸುವುದು, ನಿವೃತ್ತಿ ವೇತನ ನೀಡುವುದು, ನಿಗದಿತ ಸಮಯಕ್ಕೆ ಮಾಸಿಕ ವೇತನ ಪಾವತಿ, ಸಲಕರಣೆ ಒದಗಿಸುವುದು ಸೇರಿ 11 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತ ಬಂದಿದ್ದೇವೆ. ಆದರೂ ನ್ಯಾಯ ಸಿಗುತ್ತಿಲ್ಲ ಎಂದು ದೂರಿದರು.
ಪ್ರಮುಖರಾದ ದತ್ತಪ್ಪ ಆಪೂಸಪೇಟ ಗಂಗಮ್ಮ ಸಿದ್ರಾಮಪೂರ, ಲಕ್ಷ್ಮೀ ಬೇತಾಪಲ್ಲಿ ಸುದ್ದಿಗೋಷ್ಠಿಯಲ್ಲಿದ್ದರು.