ಜಿಲ್ಲೆ

ಮಡಿಕೇರಿ ರಸ್ತೆಗಳ ಡಾಂಬರೀಕರಣಕ್ಕೆ ೧೫ ದಿನಗಳ ಗಡುವು

ಮಡಿಕೇರಿ: ಹದಗೆಟ್ಟ ರಸ್ತೆಗಳು ಸೇರಿದಂತೆ ಮೂಲಭೂತ ಸಮಸ್ಯೆಗಳು ಮಡಿಕೇರಿ ನಗರವನ್ನು ಕಾಡುತ್ತಿದ್ದು, ಮುಂದಿನ ೧೫ ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಎಚ್ಚರಿಕೆ ನೀಡಿದೆ.


ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್‌ರವರ ನೇತೃತ್ವದಲ್ಲಿ ನಗರಸಭಾ ಅಧ್ಯಕ್ಷೆ ಅನಿತಾಪೂವಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರಮುಖರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.


ಈ ಸಂದರ್ಭ ಮಾತನಾಡಿದ ಕೆ.ಜಿ.ಪೀಟರ್, ನಗರದ ೨೩ ವಾರ್ಡ್‌ಗಳ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಹೊಂಡ, ಗುಂಡಿಗಳಿಂದ ಕೂಡಿದೆ. ಕನ್ನಂಡಬಾಣೆ ನೀರು ಶುದ್ಧೀಕರಣ ಘಟಕ ಕಾರ್ಯನಿರ್ವಹಿಸದೆ ಇರುವುದರಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ನಗರದ ಬಹುತೇಕ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಬೀದಿ ದೀಪಗಳು ಉರಿಯದೆ ನಗರದ ಬಹುತೇಕ ಎಲ್ಲಾ ಬಡಾವಣೆಗಳು ಕಾರ್ಗತ್ತಲೆಯಲ್ಲಿ ಮುಳುಗಿವೆ. ನಗರದಲ್ಲಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಮಾರುಕಟ್ಟೆ ಆವರಣ ನಿತ್ಯ ಅಶುಚಿತ್ವದಿಂದ ಕೂಡಿದೆ. ಮಾಂಸ ಮಾಡುವ ಪ್ರದೇಶ ಅವೈಜ್ಞಾನಿಕವಾಗಿದ್ದು, ಕೊಳಚೆ ಪ್ರದೇಶದಂತ್ತಿದೆ. ನೂತನ ಖಾಸಗಿ ಬಸ್ ನಿಲ್ದಾಣದ ಕಾಂಕ್ರೀಟ್ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಪ್ರಯಾಣಿಕರಿಗೆ ಅಡಚಣೆಯಾಗಿದೆ. ಇಲ್ಲಿನ ಶೌಚಾಲಯದಲ್ಲಿ ನೀರು ಮತ್ತು ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ ಎಂದು ದೂರಿದರು.


ರಾಜಾಸೀಟು ಉದ್ಯಾನವನದ ಬಳಿ ಮಕ್ಕಳ ಮನರಂಜನೆಗಾಗಿ ಇದ್ದ ಪುಟಾಣಿ ರೈಲು ಸ್ಥಗಿತಗೊಂಡು ಅನೇಕ ವರ್ಷಗಳೇ ಆಗಿದೆ. ನಗರದ ತುಂಬಾ ಬೀದಿ ನಾಯಿಗಳ ಉಪಟಳ ಮಿತಿ ಮೀರಿದ್ದು, ಭಯದ ವಾತಾವರಣವಿದೆ. ನಗರಸಭಾ ಕಚೇರಿಯಲ್ಲಿ ನಿತ್ಯ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ. ಯಾವುದೇ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ತಾವು ಗಂಭೀರವಾಗಿ ಪರಿಗಣಿಸಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ೧೫ ದಿನಗಳೊಳಗೆ ನಗರದ ರಸ್ತೆಗಳನ್ನು ಡಾಂಬರೀಕರಣಗೊಳಿಸದಿದ್ದಲ್ಲಿ ಮತ್ತು ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸೂಚಿಸದಿದ್ದಲ್ಲಿ ನಗರಸಭೆ ಎದುರು ಪ್ರತಿಭಟನೆ ನಡೆಸುವುದಾಗಿ ಪೀಟರ್ ಎಚ್ಚರಿಕೆ ನೀಡಿದರು.


ಮನವಿ ಪತ್ರ ಸಲ್ಲಿಸುವ ಸಂದರ್ಭ ಮಡಿಕೇರಿ ನಗರ ಕಾಂಗ್ರೆಸ್ ಕಾರ್ಯದರ್ಶಿ ಕೌಸರ್, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಶೌಕತ್ ಅಲಿ, ಖಜಾಂಚಿ ಎಂ.ಹೆಚ್.ಅಝೀಜ್, ಕಾರ್ಯಕರ್ತರಾದ ಸಾಧಿಕ್, ಶಾಕೀರ್, ಆಜ್ಮಲ್ ಹಾಜರಿದ್ದರು.