ಜಿಲ್ಲೆ

ಕುಡಿಯುವ ನೀರಿನ ಕಾಮಗಾರಿಗೆ 15 ಕೋಟಿ

ರವಿ ಎಸ್. ಬಳೂಟಗಿ

ನರೇಗಲ್ಲ: ಪ.ಪಂ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಕುಡಿಯುವ ನೀರು ವಿತರಣಾ ಜಾಲ ಅಳವಡಿಕೆಗೆ 15.51 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ನಡೆಸಲು ಸಾರ್ವಜನಿಕರ ಸಹಕಾರ ನೀಡಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಪ.ಪಂ ನರೇಗಲ್ಲ ವತಿಯಿಂದ ಅಮೃತ-2.0 ಯೋಜನೆಯಡಿ ಕುಡಿಯುವ ನೀರು ವಿತರಣಾ ಜಾಲ ಅಳವಡಿಸುವ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರೋಣ ಮತಕ್ಷೇತ್ರದ ಅನೇಕ ರಸ್ತೆಗಳು ಮಳೆಯಿಂದ ಹಾಳಾಗಿವೆ. ಹಂತ ಹಂತವಾಗಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ನರೇಗಲ್ಲ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗೆ 2 ಕೋಟಿ ರೂ. ಮಂಜೂರಾಗಿದೆ. ಪಟ್ಟಣದಲ್ಲಿ ಶಾದಿ ಮಹಲ್ ಕಾಮಗಾರಿಗೆ ಅನುದಾನ ನೀಡಲಾಗಿದೆ. ಕುಡಿಯುವ ನೀರಿನ ಯೋಜನೆಯು ಜೆಜೆಎಂ ಕಾಮಗಾರಿಯಂತೆ ಆಗದಿರಲಿ. ಕಾಮಗಾರಿಯ ನಂತರ ರಸ್ತೆ ದುರಸ್ತಿ ಮಾಡಬೇಕು. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ಆಗದಂತೆ ಗುತ್ತಿಗೆದಾರರು, ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಯಜ್ಞೋಪವೀತ ಸಮಾಜದ ವತಿಯಿಂದ ಸ್ಮಶಾನ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಯಿತು. ಐ.ಎಸ್. ಪಾಟೀಲ, ಪ.ಪಂ ಸದಸ್ಯ ಫಕೀರಪ್ಪ ಬಂಬ್ಲಾಪುರ, ಈರಪ್ಪ ಜೋಗಿ, ಫಕೀರಪ್ಪ ಮಳ್ಳಿ, ನಿಂಗನಗೌಡ ಲಕ್ಕನಗೌಡ್ರ, ಅಂದಪ್ಪ ಕಿಟಗೇರಿ, ಎಂ.ಎಸ್. ಧಡೇಸೂರಮಠ, ಡಾ. ಕೆ.ಬಿ. ಧನ್ನೂರ, ಸೋಮು ಲಕ್ಕನಗೌಡ್ರ, ಎಸ್.ಎ. ಪಾಟೀಲ, ಯಲ್ಲಪ್ಪ ಮಣ್ಣೊಡ್ಡರ, ಸಣ್ಣವೀರಪ್ಪ ಮಣ್ಣೊಡ್ಡರ, ಹನುಮಂತ ಅಬ್ಬಿಗೇರಿ, ಸಕ್ರಪ್ಪ ಹಡಪದ, ಬಾಳಪ್ಪ ಸೋಮಗೊಂಡ, ಅಲ್ಲಾಭಕ್ಷಿ ನದಾಫ, ಶೇಖಪ್ಪ ಜುಟ್ಲ, ಶೇಖಪ್ಪ ಕೆಂಗಾರ, ಇತರರಿದ್ದರು.