ಜಿಲ್ಲೆ

14ರಂದು ತಾಲೂಕು ಸಾಹಿತ್ಯ ಸಮ್ಮೇಳನ

ಮೂಡಲಗಿ: ನೂತನ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮಾ.14ರಂದು ಸ್ಥಳೀಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಲಿದ್ದು, ಈಚೆಗೆ ಪಾದಬೋಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀಧರ ಸ್ವಾಮೀಜಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಮತ್ತು ಪ್ರಚಾರ ಪತ್ರಿಕೆ ಬಿಡುಗಡೆಗೊಳಿಸಿದರು.

ಮಾ. 14ರಂದು ಬೆಳಗ್ಗೆ 11ಕ್ಕೆ ಕವಿ ಪಾರ್ಶ್ವಪಂಡಿತ ವೇದಿಕೆಯಲ್ಲಿ ಶ್ರೀಪಾದಬೋಧ ಸ್ವಾಮೀಜಿ ಮತ್ತು ಸುಣಧೋಳಿಯ ಶಿವಾನಂದ ಸ್ವಾಮೀಜಿಗಳ ಸಾನ್ನಿಧ್ಯ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಸಮ್ಮೇಳನ ಉದ್ಘಾಟಿಸುವರು. ಸಮ್ಮೇಳನದ ಅಧ್ಯಕ್ಷ, ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಅಧ್ಯಕ್ಷೀಯ ಭಾಷಣ ಮಾಡುವರು.

ಮುಖ್ಯ ಅತಿಥಿಗಳಾಗಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ, ವಿಧಾನ ಪರಿಷತ್ ಸದಸ್ಯರಾದ ವಿವೇಕರಾವ್ ಪಾಟೀಲ, ಹಣಮಂತ ನಿರಾಣಿ, ಅರುಣ ಶಹಾಪುರ ಭಾಗವಹಿಸುವರು. ನಾಡೋಜ ಡಾ. ಮಹೇಶ ಜೋಶಿ ಪುಸ್ತಕ ಬಿಡುಗಡೆ ಮಾಡುವರು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ನುಡಿ, ಬಾಲಶೇಖ ಬಂದಿ ಪ್ರಾಸ್ತಾವಿಕ ನುಡಿ ಮತ್ತು ಸಿದ್ರಾಮ ದ್ಯಾಗಾನಟ್ಟಿ ಸ್ವಾಗತ ನುಡಿ ಆಡುವರು.

ಉದ್ಘಾಟನಾ ಪೂರ್ವದಲ್ಲಿ ಬೆಳಿಗ್ಗೆ 7.30ಕ್ಕೆ ಸಮ್ಮೇಳನದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣವನ್ನು ತಹಸೀಲ್ದಾರ್ ಡಿ.ಜಿ.ಮಹಾತ, ನಾಡ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮತ್ತು ಪರಿಷತ್ ಧ್ವಜಾರೋಹಣವನ್ನು ಕಸಾಪ ತಾಲೂಕಾಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ನೆರವೇರಿಸುವರು.

ಬೆಳಗ್ಗೆ 8ಕ್ಕೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜರುಗಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ನೇತೃತ್ವವನ್ನು ಬಿಇಒ ಅಜಿತ ಮನ್ನಿಕೇರಿ, ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ವಹಿಸುವರು. ತಾಪಂ ಇಒ ಬಸವರಾಜ ಹೆಗ್ಗನಾಯಿಕ ಮೆರವಣಿಗೆಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ದೀಪಕ ಹರ್ದಿ, ಜಿ.ಬಿ. ಬಳಿಗಾರ, ರಾಜೇಂದ್ರ ಡಿ. ತೇರದಾಳ ಆಗಮಿಸುವರು.

ಚಿಂತನ ಗೋಷ್ಠಿ: ಮಧ್ಯಾಹ್ನ 2ಕ್ಕೆ ಜರುುವ ಚಿಂತನ ಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಲ್ ಡಾ. ಪರಶುರಾಮ ನಾಯಿಕ ವಹಿಸುವರು. ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ, ಚಿಂತಕ ಸಿದ್ಧಾರ್ಥ ವಾಡೆನ್ನವರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ತಾಲೂಕಿನ ಸಾಹಿತ್ಯಾವಲೋಕನ ಕುರಿತು ಮಾರುತಿ ದಾಸನ್ನವರ, ಜಾನಪದ ಪರಂಪರೆ ಕುರಿತು ಕುಲಗೋಡದ ರಮೇಶ ಕೌಜಲಗಿ, ಆಧ್ಯಾತ್ಮಿಕ ಪರಂಪರೆ ಕುರಿತು ಚಿದಾನಂದ ಹೂಗಾರ, ಕೃಷಿ ಮುನ್ನೋಟ ಕುರಿತು ರಾಜಾಪುರದ ರಾಜು ಬೈರುಗೋಳ ಪ್ರಬಂಧ ಮಂಡಿಸುವರು.

ಮಧ್ಯಾಹ್ನ 3.30ಕ್ಕೆ ಕವಿಗೋಷ್ಠಿ ಜರುಗಲಿದ್ದು, ಡಾ. ಮಹಾದೇವ ಜಿಡ್ಡಿಮನಿ ಅಧ್ಯಕ್ಷತೆ ವಹಿಸುವರು. ಖಾನಟ್ಟಿಯ ಮಹಾದೇವ ಪೋತರಾಜ ಆಶಯ ನುಡಿ ಹೇಳುವರು. 34 ಕವಿ, ಕವಯಿತ್ರಿಯರು ಸ್ವರಚಿತ ಕವಿತೆ ವಾಚಿಸುವರು.
ಸಾಧಕರ ಸನ್ಮಾನ: ಸಂಜೆ 5ಕ್ಕೆ ಸಾಧಕರ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಡೇರಹಟ್ಟಿ ನಾರಾಯಣ ಶರಣರು ವಹಿಸುವರು. ಮುಖ್ಯ ಅತಿಥಿಗಳಾಗಿ ವೈ.ಎಂ. ಗುಜನಟ್ಟಿ, ವೆಂಕಟೇಶ ಮುರನಾಳ, ಪ್ರಕಾಶ ಹಿರೇಮಠ, ಪ್ರಾಚಾರ್ಯರಾದ ಡಾ. ಆರ್.ಎ. ಶಾಸ್ತ್ರೀಮಠ, ಡಾ. ಆರ್.ಬಿ. ಕೊಕಟನೂರ ಭಾಗವಹಿಸುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 31 ಸಾಧಕರಿಗೆ ಸನ್ಮಾನ ಜರುಗುವುದು.

ಸಂಜೆ 6ಕ್ಕೆ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಮುನ್ಯಾಳ, ರಂಗಾಪುರದ ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ವಹಿಸುವರು. ಪ್ರೊ. ಶಿವಾನಂದ ಬೆಳಕೂಡ ಅಧ್ಯಕ್ಷತೆ ವಹಿಸುವರು. ಪ್ರೊ. ಚಂದ್ರಶೇಖರ ಅಕ್ಕಿ ಸಮಾರೋಪ ಭಾಷಣ, ಪ್ರೊ. ಸಂಗಮೇಶ ಗುಜಗೊಂಡ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಹೆಗ್ಗಳಗಿ, ಮಹಾಲಿಂಗ ಮಂಗಿ ಭಾಗವಹಿಸುವರು.

ಸಂಜೆ 7.30ಕ್ಕೆ ಸಾಂಸ್ಕೃತಿ ಸೌರಭಕ್ಕೆ ಲಾವಿದ ಶಬ್ಬೀರ್ ಡಾಂಗೆ ಅಧ್ಯಕ್ಷತೆಯಲ್ಲಿ ಸಂಗೀತಗಾರ ಬಸವರಾಜ ಮುಗಳಖೋಡ ಚಾಲನೆ ನೀಡುವರು. ವಿವಿಧ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ.
ಸಮ್ಮೇಳನದ ಎಲ್ಲ ರೀತಿಯ ಪೂರ್ವ ತಯಾರಿಯಾಗಿದ್ದು, ವಿವಿಧ ಸಮಿತಿಗಳ ಸದಸ್ಯರು ಸಮ್ಮೇಳನದ ಯಶಸ್ಸಿಗೆ ಕಾರ್ಯೋನ್ಮುಖರಾಗಿದ್ದಾರೆ. ಸಮ್ಮೇಳನದ ಯಶಸ್ಸಿಗೆ ಎಲ್ಲ ಕನ್ನಡ ಮನಸ್ಸುಗಳು ಸಹಕಾರ ನೀಡಬೇಕು ಎಂದು ಕಸಾಪ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಮನವಿ ಮಾಡಿದ್ದಾರೆ.