ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ 14ನೇ ಉಪನ್ಯಾಸ ಕಾರ್ಯಕ್ರಮವನ್ನು ಆ.24ರಂದು ಸಂಜೆ 4 ಗಂಟೆಗೆ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.
ಮುದ್ದೇನಹಳ್ಳಿ ಸತ್ಯಸಾಯಿ ಆಶ್ರಮದ ಸದ್ಗುರು ಮಧುಸೂದನ ಸಾಯಿ ಅವರು ‘ಆತ್ಮಾನೋ ಮೋಕ್ಷಾರ್ಥಂ ಜಗತ್ ಹಿತಾಯ ಚ’ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ಫೋಸಿಸ್ ಪ್ರತಿಷ್ಠಾನದ ಡಾ.ಸುಧಾಮೂರ್ತಿ ಅವರ ‘ದಾನಶೀಲತೆ ಅಗತ್ಯವೇ?’ ಕೃತಿಯ ಅನುವಾದ ‘ಇಸ್ ಚಾರಿಟಿ ಎಸೆನ್ಸಿಯಲ್’, ತಮಿಳುನಾಡಿನ ರಾಜ್ಯಪಾಲ ತಿರು ಆರ್.ಎನ್.ರವಿ ಅವರ ‘ಲೀಡರ್‌ಶಿಪ್ ಆಫ್ ಜಿ-20: ಆಪರ್ಚುನಿಟೀಸ್ ಫಾರ್ ಭಾರತ್’ ಹಾಗೂ ಅಂತಾರಾಷ್ಟ್ರೀಯ ವೃತ್ತಿಪರ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷರಾಗಿದ್ದ ಅನೂಪ್ ಎನ್.ಮೆಹ್ತಾ ಅವರ ‘ಟುಮಾರೋಸ್ ಇಂಡಿಯಾ ಬಿಗಿನ್ಸ್ ಟುಡೇ: ಲೆವೆರೇಜಿಂಗ್ ಅಕೌಂಟಬಿಲಿಟಿ ಫಾರ್ ಇಎಸ್‌ಜಿ’ ಕೃತಿಗಳನ್ನು ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್ ಲೋಕಾರ್ಪಣೆ ಮಾಡಲಿದ್ದು, ಮೈಸೂರಿನ ಪ್ರಾದೇಶಿಕ ಆಯುಕ್ತ ಡಿ.ಎಸ್.ರಮೇಶ್ ಅಧ್ಯಕ್ಷತೆ ವಹಿಸುವರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ ನೆನಪಿಗಾಗಿ 2004ರಿಂದ ಉಪನ್ಯಾಸಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ಇದರ ಆಶ್ರಯದಲ್ಲಿ ವಿವಿಧ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ವ್ಯಕ್ತಿಗಳಿಂದ ಪ್ರತಿವರ್ಷ ಉಪನ್ಯಾಸಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಮಂಜುನಾಥ್ ತಿಳಿಸಿದರು.