ಜಿಲ್ಲೆ

145 ಯೂನಿಟ್ ರಕ್ತ ಸಂಗ್ರಹ

ಲಲಾಟಾಕ್ಷ ಎಸ್

ಮಳವಳ್ಳಿ: ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರ ಮೋಹನ್ ತಿಳಿಸಿದರು.


ಪಟ್ಟಣದ ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಹೆರಿಗೆ, ಶಸ್ತ್ರಚಿಕಿತ್ಸೆ ಸಂದರ್ಭಗಳಲ್ಲಿ ರಕ್ತದ ಅನಿವಾರ್ಯತೆ ಹೆಚ್ಚಿರುತ್ತದೆ. ಯುವ ಸಮೂಹ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು. ಇದರಿಂದ ಆರೋಗ್ಯದ ಸಮತೋಲನ ಕಾಯ್ದುಕೊಳ್ಳುವುದರ ಜತೆಗೆ ಮತ್ತೊಂದು ಜೀವದ ಉಳಿವಿಗೆ ಸಹಕಾರಿಯಾಗಲಿದೆ. ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗಿಲ್ಲ. ಈ ಕಾರಣ ಎಲ್ಲರೂ ತಪ್ಪದೆ ರಕ್ತದಾನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.


ರಕ್ತದಾನ ಶಿಬಿರಗಳ ರೂವಾರಿ ಪೊಲೀಸ್ ಪ್ರಭು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನತೆ ರಕ್ತದಾನಕ್ಕೆ ಮುಂದಾಗುತ್ತಿರುವುದು ಶ್ಲಾಘನೀಯ. ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು ಶಿಬಿರಗಳನ್ನು ಆಗಾಗ್ಗೆ ಆಯೋಜಿಸಬೇಕು. ಇದರಿಂದ ರಕ್ತ ಸಂಗ್ರಹಕ್ಕೆ ಅನುಕೂಲವಾಗಲಿದೆ ಎಂದರು.


ಮಂಡ್ಯದ ಸದ್ವಿದ್ಯಾ, ಸೋಮನಹಳ್ಳಿಯ ಎಸ್‌ಸಿಎಂ, ಕೆ.ಹೊನ್ನಲಗೆರೆ ಆರ್.ಕೆ. ಪ್ಯಾರಾ ಮೆಡಿಕಲ್ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಶಿಬಿರದಲ್ಲಿ 145 ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಸುರಕ್ಷಾ ರಕ್ತ ನಿಧಿ ಕೇಂದ್ರದ ಡಾ.ಗ್ರೀಷ್ಮಾ, ಲಯನ್ ಬಸವೇಗೌಡ, ಕಳಂಜಿಂ ಒಕ್ಕೂಟದ ತಾಲೂಕು ಸಂಯೋಜಕ ಶಿವಶಂಕರ್, ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜಿನ ಆಡಳಿತ ವರ್ಗದ ಪದ್ಮಿನಿ, ರಂಜಿತಾ, ಸುಚಿತ್ರಾ, ಸುಶ್ಮಿತಾ ಇತರರಿದ್ದರು.