ಶಿವಮೊಗ್ಗ: ಜಿಲ್ಲೆಯಲ್ಲಿ 1,436 ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಕಂದಾಯ ಗ್ರಾಮ ರಚನಾ ಕೋಶದ ನಿರ್ದೇಶಕ ಬಿ.ಹೀರಾನಾಯ್್ಕ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಡಿಸಿ ಕಚೇರಿಯಲ್ಲಿ ಕಂದಾಯ ಗ್ರಾಮಗಳ ರಚನೆ ಪ್ರಕ್ರಿಯೆ ಪ್ರಗತಿ ಪರಿಶೀಲನೆ ನಡೆಸಿ, ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 4,800 ಜನವಸತಿ ಕೇಂದ್ರಗಳಿದ್ದು, ಈ ಪೈಕಿ 1,436 ಜನವಸತಿ ಕೇಂದ್ರಗಳಿಗೆ ಕಂದಾಯ ಇಲಾಖೆಯಲ್ಲಿ ಸೂಕ್ತ ದಾಖಲೆಗಳಿಲ್ಲ ಎಂದರು.
ಕಂದಾಯ ಗ್ರಾಮಗಳಲ್ಲದ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಮುಂತಾದ ಮೂಲ ಸೌಲಭ್ಯ ಕಲ್ಪಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿ ಸಿದ್ಧಪಡಿಸಿದೆ. ಮಾರ್ಗಸೂಚಿಗೆ ಒಳಪಡುವ ಜನವಸತಿ ಕೇಂದ್ರಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದರು.
ಕನಿಷ್ಟ 10 ಮನೆಗಳಿರುವ ಜನವಸತಿ ಕೇಂದ್ರಗಳನ್ನು ಗ್ರಾಮಗುಚ್ಛವೆಂದು ಪರಿಗಣಿಸಬಹುದಾಗಿದೆ. ಇದೇರೀತಿ ಕನಿಷ್ಠ 50 ಜನಸಂಖ್ಯೆಯ ಜನವಸತಿ ಕೇಂದ್ರ ಒಳಗೊಂಡಿದ್ದರೆ ಅದನ್ನು ಕಂದಾಯ ಗ್ರಾಮವಾಗಿ ಪರಿಗಣಿಸಬಹುದಾಗಿದೆ. ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದ ಬಳಿಕ ಕಲಂ 94 ಅಡಿಯಲ್ಲಿ ನಿವಾಸಿಗಳಿಗೆ ಭೂ ಒಡೆತನದ ದಾಖಲೆಗಳನ್ನು ಒದಗಿಸಬೇಕೆಂದು ತಿಳಿಸಿದರು.
2,800 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. 1,400 ಪ್ರಕರಣಗಳಲ್ಲಿ ಅಧಿಸೂಚನೆ ಸಿದ್ಧಪಡಿಸಲಾಗಿದೆ. 800 ಪ್ರಕರಣಗಳು ಬಹುತೇಕ ಅಂತಿಮಗೊಂಡಿದ್ದು, ಹಕ್ಕುಪತ್ರ ನೀಡುವ ಹಂತದಲ್ಲಿದೆ. ಶಿವಮೊಗ್ಗ ಜಿಲ್ಲೆಯಿಂದ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕುರಿತು 34 ಪ್ರಸ್ತಾವನೆಗಳು ಸರ್ಕಾರದ ಹಂತದಲ್ಲಿವೆ ಎಂದರು.
ಅರಣ್ಯ ಭೂಮಿಯಲ್ಲಿ ನೆಲೆಗೊಂಡಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಬಗ್ಗೆ ಸರ್ಕಾರದಿಂದ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ತಕ್ಷಣ, ಅಲ್ಲಿನ ನಿವಾಸಿಗಳಿಗ ಹಕ್ಕುಪತ್ರ ನೀಡುವ ಪ್ರಕ್ರಿಯೆ ಆರಂಭಿಸಬೇಕು. ಇದಕ್ಕಾಗಿ ಸಂಬಂಧಿಸಿದ ಜನವಸತಿ ಪ್ರದೇಶದಲ್ಲಿ ಗ್ರಾಮಸಭೆಯನ್ನು ಆಯೋಜಿಸಬೇಕೆಂದರು.
ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಶಿವಮೊಗ್ಗ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.