ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಧನುರ್ಮಾಸ ಪೂಜೆಯು ಜ.14 ರಂದು ಸಂಪನ್ನಗೊಳ್ಳಲಿದ್ದು, ವಿವಿಧ ದೇವತೆಗಳ ವೈಭವದ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮಕರ ಸಂಕ್ರಾಂತಿ ಹಬ್ಬದ ಹಿಂದಿನ ರಾತ್ರಿ ಬಸವ ಮಾಲಾಧಾರಿಗಳು ತಮ್ಮ ತಮ್ಮ ಗ್ರಾಮದಿಂದ ದೇವತೆಯನ್ನು ಸಿಂಗರಿಸಿಕೊಂಡು ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಕ್ಷೇತ್ರಕ್ಕೆ ಕರೆತರಲಿದ್ದು, 101 ಗ್ರಾಮದೇವತೆಗಳು ಧನುರ್ಮಾಸ ಸಮಾಪ್ತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ವಿಶೇಷವಾಗಿದೆ.
ಜ.14 ರಂದು ಸಂಜೆ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಶ್ರೀಕ್ಷೇತ್ರಕ್ಕೆ ಆಗಮಿಸಿ ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಂದು ರಾತ್ರಿ ಆವರಣದಲ್ಲಿರುವ ಪುಷ್ಕರಣಿಯಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸುವ ತೆಪ್ಪದಲ್ಲಿ ಶ್ರೀ ಬಸವೇಶ್ವರಸ್ವಾಮಿ ಉತ್ಸವಮೂರ್ತಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪ್ರತಿಮೆ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಪುಷ್ಪ ಸಿಂಹಾಸನದೊಂದಿಗೆ ತೆಪ್ಪೋತ್ಸವ ನಡೆಯಲಿದೆ.
ಶ್ರೀಕ್ಷೇತ್ರದಲ್ಲಿ ಜರುಗಲಿರುವ ಧನುರ್ಮಾಸ ಪೂಜೆಯ ಸಂಪನ್ನ ಕಾರ್ಯಕ್ರಮಕ್ಕೆ ತುಮಕೂರು, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಾನುವಾರ ರಾತ್ರಿಯೇ ಗ್ರಾಮದೇವತೆಗಳು ಮೆರವಣಿಗೆಯಲ್ಲಿ ಆಗಮಿಸಲಿವೆ.
ಮಾಲಾಧಾರಿಗಳಿಗೆ ಹಾಗೂ ಭಕ್ತರಿಗೆ ಕುಡಿಯುವ ನೀರು, ಪ್ರಸಾದ ಹಾಗೂ ಇತರ ಸೌಕರ್ಯಗಳನ್ನು ಶ್ರೀಮಠದ ವತಿಯಿಂದ ಏರ್ಪಡಿಸಲಾಗುವುದು. ಜತೆಗೆ ಸೋಮವಾರ ಬೆಳಗ್ಗೆ ದೇವತೆಗಳಿಗೆ ಶ್ರೀಮಠದ ವತಿಯಿಂದ ಮಡಿಲಕ್ಕಿ ನೀಡಿ ಗೌರವಿಸಲಾಗುವುದು ಎಂದು ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ ತಿಳಿಸಿದರು.