ಜಿಲ್ಲೆ

14 ಸೈಟ್‌ಗಳನ್ನು ಅಧಿಕೃತವಾಗಿ ವಾಪಸ್ ಪಡೆದ ಮುಡಾ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಪಡೆದಿದ್ದ 50:50 ಅನುಪಾತದ 14 ನಿವೇಶನಗಳನ್ನು ಅಧಿಕೃತವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವಾಪಸ್ ಪಡೆದಿದೆ.
ಕೆಸರೆ ಗ್ರಾಮದ ಸರ್ವೇ ನಂ.464ರಲ್ಲಿ 3.16 ಎಕರೆಗೆ ಪರ್ಯಾಯವಾಗಿ ಬೇರೆ ಬಡಾವಣೆಯಲ್ಲಿ ಪಡೆದಿದ್ದ 14 ನಿವೇಶನಗಳನ್ನು ವಾಪಸ್ ಪಡೆಯುವಂತೆ ಪಾರ್ವತಿ ಅವರು ಮುಡಾ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಮನವಿಯಂತೆ ಮುಡಾ ಕಾರ್ಯದರ್ಶಿ ಹೆೆಸರಿಗೆ ನಿವೇಶನ ವಾಪಸ್ ಪಡೆದಿರುವುದಾಗಿ ಅಧಿಕೃತ ಪತ್ರ ಬರೆದಿದ್ದಾರೆ. ನಿವೇಶನ ವಾಪಸ್ ಬಾಬ್ತು ಒಂದು ಸಾವಿರ ರೂ. ಅನ್ನು ಪಾರ್ವತಿ ಪಾವತಿಸಿದ್ದಾರೆ. ಆ ಮೂಲಕ ಅಧಿಕೃತವಾಗಿ ನಿವೇಶನಗಳು ವಾಪಸ್ ಮಾಡಿದಂತಾಗಿದೆ.
ನಿವೇಶನ ವಾಪಸ್ ನೀಡುವ ಸಂಬಂಧ ಅ.1ರಂದು ಖಾಸಗಿ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಿತ್ತು. ಗುರುವಾರ 14 ನಿವೇಶನಗಳ ಮಂಜೂರು ರದ್ದುಪಡಿಸಲಾಗಿದ್ದು, ಮುಡಾ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸದ್ದು ಮಾಡಿದ್ದ ಮುಡಾ ಪ್ರಕರಣ ಮತ್ತೊಂದು ಮಜಲು ಪಡೆದುಕೊಂಡಂತಾಗಿದೆ.

ಮುಡಾ ಕಚೇರಿಯಲ್ಲಿ ಕಡತ ಪರಿಶೀಲನೆ:
ಮುಡಾ ಹಗರಣದ ತನಿಖೆ ಕೈಗೆತ್ತಿಕೊಂಡಿರುವ ಲೋಕಾಯುಕ್ತ ಪೊಲೀಸರು ಗುರುವಾರ ಮುಡಾ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿದರು.
ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತನಿಖಾ ತಂಡ ಕಚೇರಿಗೆ ಭೇಟಿ ನೀಡಿ ವಿವಾದಿತ ನಿವೇಶನಗಳ ಕಡತ, ಯಾರಿಂದ ಯಾರಿಗೆ ಮಾರಾಟವಾಗಿದೆ, ಹೇಗೆ ನಿವೇಶನಗಳು ಬಂದಿವೆ ಇತ್ಯಾದಿ ಮಾಹಿತಿ ಸಂಗ್ರಹಿಸಿತು. ಈ ಮಧ್ಯೆ 50:50ರ ಅನುಪಾತದಡಿ ಹಂಚಿಕೆ ಮಾಡಿರುವ ನಿವೇಶನಗಳ ಮಹಜರು ಕಾರ್ಯವನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರಕ್ಕೆ ಮುಂದೂಡಿದರು.
ದೂರುದಾರ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರಿಂದ ಗುರುವಾರ ನಡೆಯಬೇಕಿದ್ದ ನಿವೇಶನ ಮಹಜರು ಮುಂದೂಡಲಾಯಿತು. ದೂರುದಾರರ ಕ್ಷಮಾಕ್ಷಮದಲ್ಲಿ ಸ್ಥಳ ಮಹಜರು ಮಾಡಬೇಕಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎನ್ನಲಾಗಿದೆ.
ಮಂಗಳವಾರ ತಡರಾತ್ರಿ ಮೈಸೂರು ತಾಲೂಕು ಕಚೇರಿಯ ಅಭಿಲೇಖನ ಶಾಖೆಯಲ್ಲಿ ಕೆಸರೆ ಗ್ರಾಮದ ಸರ್ವೇ ನಂ.464ರ ಸಂಬಂಧ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದರು. ಈ ಸರ್ವೇ ನಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಬಂದಿದ್ದ 3.16 ಎಕರೆ ಜಾಗದ ಮೂಲ ಮಾಲೀಕರು, ಯಾರಿಂದ ಯಾರಿಗೆ ಮಾರಾಟವಾಯಿತು, ಸಿದ್ದರಾಮಯ್ಯ ಅವರ ಬಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಭೂಮಿಯನ್ನು ಯಾವಾಗ ಖರೀದಿಸಿದರು, ಪಾರ್ವತಿ ಅವರಿಗೆ ಜಾಗ ಯಾವಾಗ ಹಸ್ತಾಂತರವಾಯಿತು ಎಂಬಿತ್ಯಾದಿ ಮಾಹಿತಿ ಕಲೆಹಾಕಿದ್ದರು.
ಅಲ್ಲದೆ ಮಲ್ಲಿಕಾರ್ಜುನಸ್ವಾಮಿ ಅವರು ಇರುವ ಟಿ.ಕೆ.ಬಡಾವಣೆಯ ಮನೆಯನ್ನು ಪತ್ತೆ ಮಾಡಿ, ಬೆಂಗಳೂರಿನಲ್ಲಿ ಇರುವ ಮನೆ ವಿಳಾಸವನ್ನು ಪಡೆದು ಅವರ ವಿಚಾರಣೆಗೆ ಸಿದ್ಧತೆ ನಡೆಸಿದ್ದಾರೆ.