ಹರಪನಹಳ್ಳಿ ತಾಪಂ ಆವರಣದ ಸಾಮರ್ಥ್ಯ ಸೌಧ ಭವನದಲ್ಲಿ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಟಿಎಚ್‌ಒ ಪೃಥ್ವಿ ಉದ್ಘಾಟಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಟಿ.ಅಶೋಕ್, ಟಿಪಿಒ ನವೀನ್ ಕುಮಾರ್, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಭುವನೇಶ್ವರಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೇಣುಕಾ ಜುಟ್ಲೆ, ತಾಲೂಕು ಪೋಷಣ್ ಅಭಿಯಾನ ಸಂಯೋಜಕ ಆರ್.ನಿಂಗಪ್ಪ ಇತರರಿದ್ದರು. 
ಜಿಲ್ಲೆ

ಶೇ.14 ಮಕ್ಕಳಲ್ಲಿ ಪೌಷ್ಠಿಕ ಆಹಾರದ ಕೊರತೆ

ಹರಪನಹಳ್ಳಿ: ದೇಶದ ಮಕ್ಕಳಲ್ಲಿನ ಅಪೌಷ್ಟಿಕ ತಡೆಗಟ್ಟಲು ಪ್ರಧಾನಿ ಮೋದಿ ಅವರು ಪೋಷಣ್ ಮಾಸಾಚರಣೆ ಜಾರಿಗೊಳಿಸಿದರು ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಟಿ.ಅಶೋಕ್ ಹೇಳಿದರು.

ಪಟ್ಟಣದ ತಾಪಂ ಆವರಣದ ಸಾಮರ್ಥ್ಯ ಸೌಧ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಷ್ಟ್ರೀಯ ಪೋಷಣ್ ಅಭಿಯಾನ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಪ್ರಸ್ತುತ ಶೇ.14 ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಅಂಥ ಮಕ್ಕಳನ್ನು ಗುರುತಿಸಿ ಅವರ ಸಂಕಷ್ಟ ಪರಿಹರಿಸುವುದೇ ಕಾರ್ಯಕ್ರಮದ ಧ್ಯೇಯವಾಗಿದೆ. ಅಪೌಷ್ಟಿಕತೆ ತಡೆಗಟ್ಟಲು 6 ಯೋಜನೆಗಳನ್ನು ರೂಪಿಸಲಾಗಿದೆ. ಸ್ವಚ್ಛ ಪರಿಸರ ನಿರ್ಮಾಣ, ಬೊಜ್ಜು ನಿವಾರಣೆ, 3 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೋಷಣೆ ಜತೆಗೆ ಪ್ರಾಥಮಿಕ ಶಿಕ್ಷಣ, 6 ತಿಂಗಳ ಒಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ, ಮಕ್ಕಳ ರಕ್ಷಣೆಯಲ್ಲಿ ತಂದೆಯ ಪಾತ್ರದ ಕುರಿತು ಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.

ಟಿಎಚ್‌ಒ ಪೃಥ್ವಿ ಮಾತನಾಡಿ, ಒತ್ತಡದ ಬದುಕಿನಲ್ಲಿ ನಿಧಾನದಿಂದ ಆಹಾರ ಸೇವಿಸಬೇಕು. ಗರ್ಭಿಣಿಯರಿಗೆ ಇಲಾಖೆಯಿಂದ ನೀಡುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಭುವನೇಶ್ವರಿ ಮಾತನಾಡಿ, ನವಜಾತು ಶಿಶುವಿನಿಂದ ವೃದ್ಯಾಪ್ಯದವರೆಗೆ ದೈಹಿಕ ಮತ್ತು ಮಾನಸಿಕ ಆರೊಗ್ಯ ಸಮತೋಲ ಕಾಪಾಡಲು ಪೌಷ್ಟಿಕ ಆಹಾರ ಸೇವಿಸಬೇಕು. ಹಸಿ ತರಕಾರಿ, ಧಾನ್ಯಗಳು ಹಣ್ಣು ಹಂಪಲುಗಳನ್ನು ಮಿತವಾಗಿ ಸೇವಿಸಬೇಕು. ಇಂದಿನ ಆಹಾರ ಪದಾರ್ಥಗಳು ಕಲಬೆರೆಕೆಯಿಂದ ಕೂಡಿದ್ದು, ಕ್ಯಾನ್ಸರ್ ನಂಥ ಮಾರಕ ಕಾಯಿಲೆಗಳಿಗೆ ಬರುತ್ತಿವೆ. ಮಕ್ಕಳಲ್ಲಿಯೂ ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣ ಹೆಚ್ಚಾಗಲು ಆಧುನಿಕ ಆಹಾರ ಪದ್ಧತಿ ಕಾರಣ ಎಂದು ಹೇಳಿದರು.