ಹೂಲಗೇರಾದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕಸಾಪ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ತಾಲೂಕಾಧ್ಯಕ್ಷ ಲೆಂಕೆಪ್ಪ ವಾಲಿಕಾರ, ಕಸಾಪ ಕೇಂದ್ರ ಸಂಸ್ಥೆಗಳ ಪ್ರತಿನಿಧಿ ನಬೀಸಾಬ ಕುಷ್ಟಗಿ ಇತರರಿದ್ದರು. 
ಜಿಲ್ಲೆ

ಹೂಲಗೇರಾದಲ್ಲಿ 13ನೇ ನುಡಿ ಜಾತ್ರೆ

ಗಾಯತ್ರಿ ಮಾಲಿಪಾಟೀಲ್

ಹನುಮಸಾಗರ: ಸಮೀಪದ ಹೂಲಗೇರಾ ಗ್ರಾಮದಲ್ಲಿ ಫೆ.15ರಂದು ನಡೆಯುವ ಕುಷ್ಟಗಿ ತಾಲೂಕಿನ 13ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆದಿದೆ. ಗ್ರಾಪಂನಿಂದ ವೇದಿಕೆ ಮೈದಾನ ಸ್ವಚ್ಛ ಮಾಡಲಾಗುತ್ತಿದ್ದು, ಅವಶ್ಯ ಇರುವೆಡೆ ಮರಂ ಹಾಕಲಾಗುತ್ತಿದೆ. ಗ್ರಾಮದ ಪ್ರಮುಖ ಬೀದಿ ಹಾಗೂ ಚರಂಡಿ ಸ್ವಚ್ಛತೆ, ಪ್ರತಿ ಮನೆ ಮೇಲೆ ಕನ್ನಡ ಧ್ವಜ ಹಾರಿಸಲು ತಯಾರಿ ನಡೆದಿದೆ. ಎರಡೂವರೆ ಎಕರೆ ಜಾಗದಲ್ಲಿ ವೇದಿಕೆ ನಿರ್ಮಾಣ ಇತರ ಕಾರ್ಯಕ್ರಮಗಳಿಗೆ ತಯಾರಿ ನಡೆದಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ: ನಿಗದಿತ ದಿನಾಂಕ ಸಮೀಪಿಸುತ್ತಿದ್ದರೂ ಆಮಂತ್ರಣ ಪತ್ರಿಕೆ ಬಿಡುಗಡೆ ಆಗಿರಲಿಲ್ಲ. ಇದರಿಂದ ಸಮ್ಮೇಳನ ಮುಂದೂರಬಹುದೆಂಬ ಮಾತು ಕೇಳಿ ಬರುತ್ತಿದ್ದವು. ಮಂಗಳವಾರ ಸಂಜೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ದಿನಾಂಕ ಮುಂದೂಡಿಕೆ ಬಗೆಗಿನ ಗೊಂದಲಕ್ಕೆ ತೆರೆ ಎಳೆಯಲಾಗಿದೆ.

ಹಿರಿಯ ಸಾಹಿತಿ ಹ.ಯ. ಈಟಿಯವರ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಗೀತ ಕಲಾವಿದ ದಿ.ವಾಸಪ್ಪ ಮಾಸ್ತರ್ ಮಹಾ ವೇದಿಕೆ, ಹೂಲಗೇರಿಯ ದಿ.ಶೇಖರಪ್ಪ ಬುದ್ಧಿನ್ನಿ ಹೆಸರಿನಲ್ಲಿ ಕಲ್ಯಾಣ ಮಂಟಪ ನಿರ್ಮಾಣವಾಗಲಿದೆ. ಫೆ.15ರ ಬೆಳಗ್ಗೆ 7.30 ಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ್ ಅವರು ಪರಿಷತ್ತಿನ ಧ್ವಜಾರೋಹಣ, ಸ್ವಾಗತ ಸಮಿತಿ ಅಧ್ಯಕ್ಷ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ಎಚ್.ದೊಡ್ಡನಗೌಡ ಪಾಟೀಲ್ ಅವರು ರಾಷ್ಟ್ರ ಧ್ವಜಾರೋಹಣ, ಕಸಾಪ ತಾಲೂಕಧ್ಯಕ್ಷ ಲೆಂಕಪ್ಪ ವಾಲಿಕಾರ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಅಂದು ಬೆಳಗ್ಗೆ 8.30ಕ್ಕೆ ಶ್ರೀ ಗುಂಡಮಲ್ಲೇಶ್ವರ ದೇವಸ್ಥಾನದಿಂದ ಕಲಾತ್ಮಕ ಎತ್ತಿನ ಬಂಡಿಯಲ್ಲಿ ಜನಪದ ವಾದ್ಯ ಮೇಳದೊಂದಿಗೆ ಸಮ್ಮೇಳನಾಧ್ಯಕ್ಷರು ಹಾಗೂ ನಾಡದೇವತೆ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಖ್ಯವೇದಿಕೆಗೆ ಆಗಮಿಸಲಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಶರಣಪ್ಪ ಗೋನಾಳ ಹಾಗೂ ಭಾರತ ಸೇವಾದಳದ ರಾಜ್ಯ ಉಪದಳಪತಿ ಕಾಶೀನಾಥ ಹಂದ್ರಾಳ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 10ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ರಾಜ್ಯ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್.ದುರ್ಗಾದಾಸ ಅವರು ಉದ್ಘಾಟನೆ ಮಾಡಲಿದ್ದಾರೆ. ನಾಡಗೀತೆ ಮತ್ತು ರೈತ ಗೀತೆಯನ್ನು ಸಂಗೀತ ಶಿಕ್ಷಕ ಜುಮ್ಮನಗೌಡ ಪಾಟೀಲ್, ಸಿರಿಗನ್ನಡ ಪಾಠಶಾಲೆಯ ಗ್ಯಾನಪ್ಪ ತಳವಾರ ಅವರು ಹಾಡಲಿದ್ದಾರೆ. ನಂತರ ಸಮ್ಮೇಳಾಧ್ಯಕ್ಷರ ಪರಿಚಯ, ನುಡಿ ಹೊತ್ತಿಗೆ ಬಿಡುಗಡೆ, ಅಧ್ಯಕ್ಷರ ನುಡಿ, ಪುಲಿಗಿರಿ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿವಿಧ ಲೇಖಕರ ಗ್ರಂಥಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕುಷ್ಟಗಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಡಾಣಿ ಅವರು ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಸಂಕೀರ್ಣ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. 3ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 5ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ್, ತಾಲೂಕಧ್ಯಕ್ಷ ಲೆಂಕಪ್ಪ ವಾಲಿಕಾರ, ನಿಕಟಪೂರ್ವ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ 7ಕ್ಕೆ ಸಮಾರೋಪ ಸಮಾರಂಭದಲ್ಲಿ ಹಿರಿಯ ಜನಪದ ಸಾಹಿತಿ ಸಿದ್ದಪ್ಪ ಬಿದರಿ ಸಮಾರೋಪ ನುಡಿ ಆಡಲಿದ್ದಾರೆ. ನಂತರ ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ನುಡಿ ಜಾತ್ರೆಗೆ ತೆರೆಬಿಳಲಿದೆ.