ಮಂಗಳೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಂಚಾರ ನಿಯಮಗಳ ಪಾಲನೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮಹತ್ವದ ಕ್ರಮ ಕೈಗೊಂಡಿದೆ. 2026ನೇ ಸಾಲಿನಲ್ಲಿ ಘೋರ ಅಪಘಾತ ಪ್ರಕರಣಗಳು ಹಾಗೂ ಗಂಭೀರ ಸಂಚಾರ ನಿಯಮ ಉಲ್ಲಂಘನೆಗಳಲ್ಲಿ ಭಾಗಿಯಾಗಿದ್ದ ಒಟ್ಟು 224 ವಾಹನ ಚಾಲಕರ ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸುವಂತೆ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗಳಿಗೆ ಶಿಫಾರಸು ಸಲ್ಲಿಸಲಾಗಿದೆ. ಈ ಪೈಕಿ 137 ಚಾಲನಾ ಪರವಾನಗಿಗಳು ಈಗಾಗಲೇ ಅಮಾನತ್ತಾಗಿದ್ದು, ಉಳಿದ ಪ್ರಕರಣಗಳ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ, ಮಾರಕ ಅಪಘಾತಗಳಿಗೆ ಕಾರಣವಾಗುವ ನಿರ್ಲಕ್ಷೃದ ಚಾಲನೆ, ಅಪಾಯಕಾರಿ ವಾಹನ ಚಾಲನೆ ಸೇರಿದಂತೆ ಹಲವು ಗಂಭೀರ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ವಿಶೇಷ ನಿಗಾ ವಹಿಸಲಾಗಿದೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ವಾಹನ ಚಾಲಕರ ವಿರುದ್ಧ ಕೇವಲ ದಂಡ ವಿಧಿಸುವುದಲ್ಲದೆ, ಅವರ ಚಾಲನಾ ಪರವಾನಗಿಯನ್ನೇ ಅಮಾನತುಗೊಳಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಪೊಲೀಸರು ವಶಪಡಿಸಿಕೊಂಡ ಚಾಲನಾ ಪರವಾನಗಿಗಳನ್ನು ಸಂಬಂಧಪಟ್ಟ ಆರ್‌ಟಿಒ ಕಚೇರಿಗಳಿಗೆ ಕಳುಹಿಸಿ, ಮೋಟಾರು ವಾಹನ ಕಾಯ್ದೆಯ ಅನ್ವಯ ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ. ಆರ್‌ಟಿಒ ಅಧಿಕಾರಿಗಳು ಪ್ರಕರಣಗಳ ಪರಿಶೀಲನೆ ನಡೆಸಿ, ಈಗಾಗಲೇ 137 ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸಿದ್ದು, ಉಳಿದ ಅರ್ಜಿಗಳ ವಿಚಾರಣೆ ಮತ್ತು ಕಾನೂನು ಪ್ರಕ್ರಿಯೆ ಮುಂದುವರಿದಿದೆ.
ನಗರದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವುದು, ಸಾರ್ವಜನಿಕರಲ್ಲಿ ಸಂಚಾರ ಶಿಸ್ತು ಬೆಳೆಸುವುದು ಹಾಗೂ ಜೀವಹಾನಿಯನ್ನು ತಡೆಯುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
ವಾಹನ ಚಾಲಕರು ವೇಗ ಮಿತಿ ಪಾಲಿಸುವುದು, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವುದು, ಮೊಬೈಲ್ ಫೋನ್ ಬಳಸುತ್ತ ವಾಹನ ಚಲಾಯಿಸದಿರುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದು ಸೇರಿದಂತೆ ಎಲ್ಲಾ ಸಂಚಾರ ನಿಯಮಗಳನ್ನು ಪಾಲಿಸಿದರೆ ಮಾತ್ರ ರಸ್ತೆ ಸುರಕ್ಷತೆ ಸಾಧ್ಯವಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಕರೆ ನೀಡಿದೆ.
ದಂಡ ಶೇ.50 ರಿಯಾಯಿತಿ 35,160 ಪ್ರಕರಣಗಳು ಮುಕ್ತಾಯ
ವಾಹನ ಸವಾರರು 2026ರ ಮೇ ತಿಂಗಳವರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿಸಲು ಬಾಕಿ ಉಳಿದವರಿಗೆ ಜೂ.21 ರಿಂದ ಜು.10 ರ ವರೆಗೆ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ಈ ವಿಶೇಷ ಕಾರ್ಯಾಚರಣೆಯ ಅವಧಿಯಲ್ಲಿ, ಒಟ್ಟು 35,160 ಬಾಕಿ ಇದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ 92,43,400 ರೂ. ದಂಡದ ಮೊತ್ತವನ್ನು ವಾಹನ ಸವಾರರು/ಚಾಲಕರು ಆನ್ ಲೈನ್ ಮೂಲಕ ಹಾಗೂ ಖುದ್ದಾಗಿ ಪೊಲೀಸ್ ಠಾಣೆಗೆ ಬಂದು ಪಾವತಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.
ಇದರ ಪೈಕಿ ಎ-ಐ ಕ್ಯಾಮೆರದ ಮೂಲಕ ಸೆರೆ ಹಿಡಿದ ಪ್ರಕರಣಗಳು 18,792, ಅಧಿಕಾರಿ/ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಕಂಡು ಬಂದ ನಿಯಮ ಉಲ್ಲಂಘನೆಯ ಕುರಿತು ದಾಖಲಾದ ಪ್ರಕರಣಗಳು 16,368 ಆಗಿವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.