ಕೆಜಿಎಫ್​ನ ಮಾರಿಕುಪ್ಪಂ&-ಕುಪ್ಪಂ ನಡುವಿನ ರೈಲ್ವೆ ಹಳಿ ಅಳವಡಿಕೆ ಕಾಮಗಾರಿಯನ್ನು ಸಂಸದ ಎಸ್​.ಮುನಿಸ್ವಾಮಿ ವೀಕ್ಷಿಸಿದರು. ಮುಖಂಡರಾದ ಜಿ.ರವಿಕುಮಾರ್​, ಎನ್​.ವಿಜಯಕುಮಾರ್​, ಕೆ.ಆರ್​.ರಮೇಶ್​, ವೆಂಕಟೇಶ್​ ಅಲಿಯಾಸ್​ ಜಾಮ್​, ನವೀನ್​ ಜೈನ್​, ದಾವೂದ್​ ಇದ್ದರು. 
ಜಿಲ್ಲೆ

ರೈಲು ನಿಲ್ದಾಣ ಮೇಲ್ದರ್ಜೆಗೆ 135 ಕೋಟಿ ರೂ. ಅನುದಾನ

ಸಂಸದ ಮುನಿಸ್ವಾಮಿ ಮಾಹಿತಿ | ಮಾರಿಕುಪ್ಪಂ & ಕುಪ್ಪಂ ಮಾರ್ಗದ ಹಳಿ ಅಳವಡಿಕೆ ಕಾಮಗಾರಿ ಪರಿಶೀಲನೆ

ಕೆಜಿಎಫ್​: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕೇಂದ್ರ ರೈಲ್ವೆ ಸಚಿವಾಲಯವು ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಆರಂಭ ಸೇರಿ ಹಲವು ದಾಖಲೆಗಳನ್ನು ಮಾಡಿದ್ದು, ಕೋಲಾರ ಲೋಕಸಭಾ ವ್ಯಾಪ್ತಿಯ ಎಲ್ಲ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು 135 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಸಂಸದ ಎಸ್​.ಮುನಿಸ್ವಾಮಿ ತಿಳಿಸಿದರು.
ತಾಲೂಕಿನ ಮಾರಿಕುಪ್ಪಂ-ಕುಪ್ಪಂ&ಕುಪ್ಪಂ ಮಧ್ಯೆ ನಡೆಯುತ್ತಿರುವ ನೂತನ ರೈಲು ಹಳಿ ಅಳವಡಿಕೆ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ಮಾತನಾಡಿ, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಾರಿಕುಪ್ಪಂ-&ಕುಪ್ಪಂ ಮಧ್ಯೆ ನೂತನ ಹಳಿ ಅಳವಡಿಕೆ ಕಾಮಗಾರಿಗೆ ಈ ಹಿಂದೆ 200 ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗಿತ್ತು. ಈಗ ಕಾಮಗಾರಿ ಪ್ರಗತಿಯಲ್ಲಿದ್ದು, ಅದರ ವೇಗವನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಆ.14ರಂದು ರೈಲ್ವೆ ಇಲಾಖೆ ಜನರಲ್​ ಮ್ಯಾನೇಜರ್​, ಅಧಿಕಾರಿಗಳು, ಗುತ್ತಿಗೆದಾರರು, ಇಂಜಿನಿಯರ್​ಗಳ ಸಭೆ ಕರೆಯಲಾಗಿದೆ. ಎಲ್ಲೆಲ್ಲೆ ಕಾಮಗಾರಿ ನಡೆಯುತ್ತಿದೆ, ಎಲ್ಲೆಲ್ಲಿ ಅಡಚಣೆಯಾಗಿದೆ, ನಿಮಾರ್ಣ ಕಾಮಗಾರಿಗೆ ಇರುವ ತೊಡಕುಗಳ ಬಗ್ಗೆ ಅಂದು ಚರ್ಚಿಸಿ, ಮುಂದಿನ ಸಂಸತ್​ ಚುನಾವಣೆಗೂ ಮುನ್ನವೇ ಮಾರಿಕುಪ್ಪಂ- ಮಾರ್ಗವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಫ್ಲೈ ಓವರ್ ನಿರ್ಮಾಣಕ್ಕೆ 57ಕೋಟಿ ರೂ. : ಮಾಲೂರಿನಲ್ಲಿ ರೈಲ್ವೆ ಫ್ಲೈ ಓವರ್​ ನಿಮಾರ್ಣಕ್ಕೆ ಸಿಆರ್​ಎಫ್​ ನಿಧಿಯಲ್ಲಿ 31 ಕೋಟಿ ರೂಪಾಯಿ, ಟೇಕಲ್​ನಲ್ಲಿ ರೈಲ್ವೆ ಮೇಲ್ಸೇತುವೆ ನಿಮಾರ್ಣಕ್ಕೆ 26 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಅಲ್ಲದೇ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಎಕ್ಸಲೇಟರ್​ ಅಳವಡಿಕೆ, ಮಾರಿಕುಪ್ಪಂ, ಉರಿಗಾಂ, ಬಿಸಾನತ್ತಂ ನಿಲ್ದಾಣಗಳಲ್ಲಿ ಶೌಚಗೃಹ, ವಿದ್ಯುತ್​ ದೀಪ, ಸಿಸಿ ಕ್ಯಾಮೆರಾ, ಪ್ಲಾಟ್​ಫಾರಂಗಳು ಹಾಗೂ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ ಎಂದು ಸಂಸದರು ಹೇಳಿದರು.

ಸಚಿವರಿಂದ ಹಕ್ಕು ಪತ್ರ ವಿತರಣೆ: ಬಿಜಿಎಂಎಲ್​ ಮನೆಗಳ ಸರ್ವೇ ಕಾರ್ಯ ನಡೆಯುತ್ತಿದ್ದು, ಸರ್ವೇ ಕಾರ್ಯ ಮುಗಿಯುತ್ತಿದ್ದಂತೆ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಅವರು ಎಸ್​ಟಿಬಿಪಿ ಯೋಜನೆಯಡಿ ಬಿಜಿಎಂಎಲ್​ನ 2,800 ನಿವೃತ್ತ ಕಾರ್ಮಿಕರಿಗೆ ಮನೆಗಳ ಹಕ್ಕುಪತ್ರ ವಿತರಿಸಲಿದ್ದಾರೆ. ಇವರನ್ನು ಹೊರತುಪಡಿಸಿ ಮೈನಿಂಗ್​ ಪ್ರದೇಶದಲ್ಲಿ ಸುಮಾರು 10ರಿಂದ 14 ಸಾವಿರ ಮಂದಿ ಮನೆಗಳನ್ನು ನಿಮಾರ್ಣ ಮಾಡಿಕೊಂಡಿದ್ದು, ಅವರಿಗೂ ನ್ಯಾಯ ಒದಗಿಸಲು ಕ್ರಮವಹಿಸಲಾಗುವುದು ಎಂದು ಸಂಸದ ಮುನಿಸ್ವಾಮಿ ಭರವಸೆ ನೀಡಿದರು.

ಗೋಲ್ಡನ್​ ಸಫಾರಿ : ಶತಮಾನಗಳ ಇತಿಹಾಸವಿರುವ ಬಿಜಿಎಂಎಲ್​ ಕಟ್ಟಡಗಳನ್ನು ಸ್ಥಳಿಯವಾಗಿ ಯಾರಿಗೂ ಹಸ್ತಾಂತರಿಸದೇ ಗೋಲ್ಡನ್​ ಸಫಾರಿಯನ್ನಾಗಿ ಪರಿವರ್ತಿಸಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕೆ ಸಂಬಂಧಿಸಿದಂತೆ ಸಂಸತ್​ ಅಧಿವೇಶನದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತರಲಾಗಿದೆ. ಅಲ್ಲದೇ ಕೆಜಿಎಫ್​ನಗರದ ಚಿನ್ನದ ಗಣಿಗೆ ಸಂಬಂಧಿತ ಕಾರ್ಖಾನೆ, ಚಿನ್ನ ಶುದ್ಧೀಕರಣ ಘಟಕ ಸೇರಿ ಹಳೇ ಕಟ್ಟಡಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಗಣಿ ಸಚಿವಾಲಯದ ಕಾರ್ಯದರ್ಶಿ ಮತ್ತು ಅಧಿಕಾರಿಗಳೊಂದಿಗೆ ಮುಂದಿನ ಬುಧವಾರ (ಆ.23) ರೈಲ್ವೆ ಸಚಿವರು ನವದೆಹಲಿಯಲ್ಲಿ ಚರ್ಚೆ ನಡೆಸಲಿದ್ದಾರೆ ಎಂದರು.

ಇಂಡಸ್ಟ್ರಿಯಲ್​ ಕಾರಿಡಾರ್​: ಚಿನ್ನದ ಗಣಿ ಕಾರ್ಯನಿರ್ವಹಿಸುತ್ತಿದ್ದಾಗಿನ ವೈಭವ ಮತ್ತೆ ಮರುಕಳಿಸಲು ಅಗತ್ಯ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ಬಿಜಿಎಂಎಲ್​ ವಶದಲ್ಲಿರುವ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಇಂಡಸ್ಟ್ರಿಯಲ್​ ಕಾರಿಡಾರ್​ ನಿಮಾರ್ಣಕ್ಕೆ ಈ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2024ರ ಜನವರಿಯಲ್ಲಿ -ಬೆಂಗಳೂರು&ಚೆನ್ನೆ$ ಎಕ್ಸ್​ಪ್ರೆಸ್​ ಕಾರಿಡಾರ್​ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ, ಕೇಂದ್ರ ಸರ್ಕಾರದಿಂದಲೇ ಇಂಡಸ್ಟ್ರಿಯಲ್​ ಕಾರಿಡಾರ್​ ನಿಮಾರ್ಣ ಮಾಡಲಾಗುವುದು ಎಂದು ಸಂಸದರು ಮಾಹಿತಿ ನೀಡಿದರು.

ಸ್ಥಳಿಯ ಶಾಸಕರು ಹಾಗೂ ಅವರ ತಂದೆ ಈ ಹಿಂದೆ ಸಂಸದರಾಗಿದ್ದ ಅವಧಿಯಲ್ಲೂ ಬಿಜಿಎಂಎಲ್​ ಸಂಬಂಧಿತ ಯಾವುದೇ ಕೆಲಸಗಳನ್ನು ಮಾಡಿಲ್ಲ. ಆದರೂ ತೋರ್ಪಡಿಕೆಗೋಸ್ಕರ ಬಿಜಿಎಂಎಲ್​ನಲ್ಲಿ ನಿಂತುಕೊಳ್ಳುವುದು, ಮೀಟಿಂಗ್​ಗಳನ್ನು ನಡೆಸುವುದನ್ನು ಮಾಡುತ್ತಿದ್ದಾರೆ. ಇದರಿಂದ ಈ ಭಾಗದವರಿಗೆ ಯಾವುದೇ ಅನುಕೂಲವಾಗಿಲ್ಲ. ಇಲ್ಲಿ ಅಭಿವೃದ್ಧಿ ಕಾರ್ಯಗಳೇನಾದರೂ ನಡೆದಿದ್ದರೇ ಅದು ಕೇಂದ್ರ ಸರ್ಕಾರವೇ ಕೈಗೊಂಡಿರುವುದೇ, ಹೊರತೂ ರಾಜ್ಯ ಸರ್ಕಾರವಲ್ಲ ಎಂದು ಶಾಸಕಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.