ಶಿರಸಿ: ವರದಾ ನದಿಯಲ್ಲಿ ಪ್ರವಾಹ ಒಮ್ಮೆಲೇ ಏರಿದೆ. ಇದರಿಂದಾಗಿ ತಾಲೂಕಿನ ಬನವಾಸಿ ಭಾಗದ 1300 ಹೆಕ್ಟೇರ್ ಕೃಷಿ ಭೂಮಿ ಮುಳುಗಡೆಯಾಗಿದೆ. ಜತೆಗೆ ಕೆಲ ಗ್ರಾಮಗಳ ಸಂಪರ್ಕ ಕಡಿತ ಆತಂಕ ಎದುರಾಗಿದೆ.
ಬುಧವಾರ ಸಂಜೆಯ ವೇಳೆ ವರದಾ ನದಿಯಲ್ಲಿ ಪ್ರವಾಹ ಅಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು. ಇಲ್ಲಿಯ ಕೆಲ ಪ್ರದೇಶಗಳಲ್ಲಿ ನೀರು ಏರಿಕೆಯಾಗಿ ಬನವಾಸಿ ಸುತ್ತಮುತ್ತಲಿನ ಕೆಲ ಕೃಷಿ ಭೂಮಿ ಮುಳುಗಡೆಯಾಗಿತ್ತು. ಆದರೆ, ಬುಧವಾರ ತಡ ರಾತ್ರಿ ವರದೆಯ ಪ್ರವಾಹ ಸ್ಥಿತಿ ಒಮ್ಮೆಲೇ ಏರಿದೆ. ಗುರುವಾರ ಬೆಳಗಿನ ವೇಳೆ ನದಿ ನೀರು ಮತ್ತಷ್ಟು ಹೆಚ್ಚಳವಾಗಿದೆ.
ವರದಾ ನದಿ ಶಿರಸಿ ತಾಲೂಕಿನ ಬನವಾಸಿ ಭಾಗದಲ್ಲಿ 9 ಕಿ.ಮೀ. ಪ್ರದೇಶದಲ್ಲಿ ಮಾತ್ರ ಹರಿದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿ, ಜಿಲ್ಲೆಯ ಬನವಾಸಿ ಭಾಗದಲ್ಲಿ ಹರಿದು ಮುಂದೆ ಸಾಗುವ ಈ ನದಿ ಸಮಸ್ಯೆಗಳನ್ನು ಮಾತ್ರ ಇಲ್ಲಿ ಸೃಷ್ಟಿಸುತ್ತಿದೆ. ಬೇಸಿಗೆಯ ದಿನಗಳಲ್ಲಿ ಬರಿದಾದರೂ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮತ್ತು ಸಾಗರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ವರದಾ ನದಿಯಲ್ಲಿ ನೀರು ಏರಿಕೆಯಾಗುತ್ತದೆ. ಪ್ರತಿ ವರ್ಷವೂ ವರದೆಯಲ್ಲಿ ಪ್ರವಾಹ ಏರಿ ಕೃಷಿ ಭೂಮಿ ಮುಳುಗಡೆಯಾಗುತ್ತದೆಯಾದರೂ ಈ ವರ್ಷ ನದಿ ನೀರು ಒಮ್ಮೆಲೇ ಏರಿಕೆಯಾಗಿದ್ದು ಇಲ್ಲಿಯ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಇಲ್ಲಿ ಭತ್ತದ ಗದ್ದೆ, ಅಡಕೆ ತೋಟ, ಅನಾನಸ್ ಬೆಳೆಯುವ ಪ್ರದೇಶಗಳು ಮುಳುಗಡೆಯಾಗಿವೆ.
ಗರ್ಭಿಣಿ, ವೃದ್ಧರ ಸ್ಥಳಾಂತರವರದಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚುತ್ತಿದ್ದಂತೆ ಮೊಗಳ್ಳಿ, ಯಡಿಯೂರಬೈಲ್, ತಿಗಣಿ ಸೇರಿ ಹಲವು ಗ್ರಾಮಗಳ ಗರ್ಭಿಣಿಯರು ಮತ್ತು ವೃದ್ಧರನ್ನು ಈಗಾಗಲೇ ತಮ್ಮ ನೆಂಟರ ಮನೆಗಳಿಗೆ ಕಳುಹಿಸಲಾಗಿದೆ. ಪ್ರವಾಹ ಪರಿಸ್ಥಿತಿ ಮತ್ತಷ್ಟು ಏರಿಕೆಯಾದರೆ ಕೊನೆಯ ಕ್ಷಣದಲ್ಲಿ ಅವರನ್ನು ಸ್ಥಳಾಂತರಿಸುವುದು ಕಷ್ಟ ಎಂಬ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆಯೇ ಅವರನ್ನು ಕಳಿಸಿಕೊಟ್ಟಿದ್ದಾರೆ. ಈಗ ಮೊಗಳ್ಳಿ ಸೇರಿ ಕೆಲ ಗ್ರಾಮಗಳ ಸಂಪರ್ಕ ರಸ್ತೆಯೂ ಜಲಾವೃತಗೊಳ್ಳಲಾರಂಭಿಸಿದೆ.
ಅಜ್ಜರಣಿಗೆ ಬನವಾಸಿ ಸಂಪರ್ಕ ಕಡಿತ
ವರದಾ ನದಿಯ ದಿಢೀರ್ ಪ್ರವಾಹದಿಂದಾಗಿ ಇಲ್ಲಿಯ ಹತ್ತಕ್ಕೂ ಅಧಿಕ ಹಳ್ಳಿಯ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಅಜ್ಜರಣಿ ಭಾಗಕ್ಕೆ ತೆರಳುವ ಸೇತುವೆ ಜಲಾವೃತವಾಗಿದ್ದು, ಈ ಗ್ರಾಮದ ಜನತೆಗೆ ಬನವಾಸಿ ಸಂಪರ್ಕ ಕಡಿತಗೊಂಡಿದೆ. ಬದಲಿ ಮಾರ್ಗದ ಮೂಲಕ ಗುಡ್ನಾಪುರದಿಂದ ಅವರು ಸಂಪರ್ಕ ಕಲ್ಪಿಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಬನವಾಸಿಯಿಂದ ಚಂದ್ರಗುತ್ತಿಗೆ ತೆರಳುವ ಮುಖ್ಯ ರಸ್ತೆ ಜಲಾವೃತಗೊಂಡಿದೆ. ಇಲ್ಲಿಯ ಮತಗುಣಿ, ಭಾಶಿ, ಮೊಗವಳ್ಳಿ, ತಿಗಣಿ, ಯಡಗೊಪ್ಪ, ಯಡಿಯೂರಬೈಲ್ ಭಾಗದ ತಗ್ಗು ಪ್ರದೇಶದ ಸ್ಥಳಗಳು ಜಲಾವೃತಗೊಂಡಿವೆ. ಪ್ರವಾಹ ಹೆಚ್ಚಾದಲ್ಲಿ ಇಲ್ಲಿಯ ಕೆಲ ಮನೆಗಳಿಗೂ ನೀರು ನುಗ್ಗುವ ಸಾಧ್ಯತೆ ಇದೆ.
ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ತೊಂದರೆ ಉಂಟಾದ ಸ್ಥಳಗಳಲ್ಲಿ ವಿಶೇಷ ಒತ್ತು ನೀಡಿದ್ದೇವೆ. ಅಗತ್ಯ ಇರುವಲ್ಲಿ ಕಾಳಜಿ ಕೇಂದ್ರ ಆರಂಭಿಸುತ್ತೇವೆ. ವರದಾ ನದಿ ಪ್ರವಾಹದಿಂದ ಕೆಲ ಹಳ್ಳಿಗಳು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ನಾವು ಮುನ್ನೆಚ್ಚರಿಕೆ ವಹಿಸಿದ್ದೇವೆ.| ಕೆ.ವಿ. ಕಾವ್ಯಾರಾಣಿ ಉಪವಿಭಾಗಾಧಿಕಾರಿ ಶಿರಸಿ