ಪಾಂಡವಪುರ: ಹೋರಾಟ ಮತ್ತು ಚಳವಳಿಗಳ ಮೂಲಕ ರೈತರ ಹಿತ ಕಾಯುವ ಜತೆಗೆ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಣೆಗಾಗಿ ಸ್ವರಾಜ್ ಉತ್ಸವ ಆಯೋಜಿಸಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರೈತಸಂಘ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ಸೆ.13 ರಂದು ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸ್ವರಾಜ್ ಉತ್ಸವ ಆಯೋಜಿಸಿದ್ದು, ಗ್ರಾಮೀಣ ಪ್ರದೇಶದ ಜನರು ಮತ್ತು ಗ್ರಾಮಗಳು ಸ್ವಾವಲಂಬನೆಯಾಗಿ ಬದುಕುವಂತೆ ಮಾಡಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಹೀಗಾಗಿ, ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ವಿನೂತನ ಪ್ರಯತ್ನ ಮಾಡುತ್ತಿದ್ದೇವೆ. ಸ್ವರಾಜ್ ಉತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳ ಸುಮಾರು 30ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು ಭಾಗವಹಿಸಲಿವೆ. ಇಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಯುವ ಜನತೆ, ಆರ್ಥಿಕತೆ, ಪ್ರವಾಸೋದ್ಯಮ, ಪರಿಸರ ವಿಜ್ಞಾನ, ಹವಾಮಾನ ವೈಪರೀತ್ಯ ಸೇರಿದಂತೆ ಪ್ರಮುಖವಾಗಿ 12 ಪ್ರಮುಖ ಅಂಶಗಳನ್ನು ಒಳಗೊಂಡಂತೆ ಜನರಿಗೆ ಅರಿವು ಮೂಡಿಸಲಾಗುವುದು ಎಂದರು.
ಉತ್ಸವದಲ್ಲಿ ಭಾಗಿಯಾಗುವ ಜನರು ತಮ್ಮ ಆಸಕ್ತಿ, ಅನುಕೂಲಕ್ಕೆ ಅನುಗುಣವಾಗಿ ಯಾವುದಾದರೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು. ಸರ್ಕಾರವೇ ಎಲ್ಲವನ್ನು ಮಾಡಬೇಕು ಎಂಬ ಮನೋಭಾವ ಬಿಡಬೇಕು. ಆಡಳಿತ ವೆಚ್ಚ ಹೆಚ್ಚಾಗುತ್ತಿದ್ದು, ಸರ್ಕಾರ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ. ಸರ್ಕಾರ ರೂಪಿಸುವ ಯೋಜನೆಗಳು ಕೂಡ ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ನಾವು ಇದುವರೆಗೂ ಶೇ.10 ಮಾತ್ರ ಪ್ರಗತಿ ಸಾಧಿಸಿದ್ದೇವೆ. ಇನ್ನೂ ಶೇ.90 ಪ್ರಗತಿ ಸಾಧಿಸಬೇಕಿದೆ ಎಂದು ನೀತಿ ಆಯೋಗದ ಅಧ್ಯಕ್ಷರೇ ಹೇಳುತ್ತಿದ್ದಾರೆ. ಸ್ವಾವಲಂಬನೆ ಎಂಬುದು ಹೊಸ ಪದವೂ ಅಲ್ಲ, ಪ್ರಯೋಗವೂ ಅಲ್ಲ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸ್ವಾವಲಂಬನೆ ಸಾಧಿಸುವುದಾಗಿದೆ ಎಂದು ಹೇಳಿದರು.
ಸಂಶೋಧಕಿ ಕವಿತಾ ಕುರಗಂಟಿ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಕಾರ್ಯದರ್ಶಿ ಎಣ್ಣೆಹೊಳೆಕೊಪ್ಪಲು ಮಂಜು, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಪುಟ್ಟಣ್ಣಯ್ಯ ಫೌಂಡೇಷನ್ ಮುಖ್ಯಸ್ಥ ರಣಜಿತ್ ಇತರರು ಇದ್ದರು.