ಜಿಲ್ಲೆ

13 ಮಂದಿಗೆ ಕರೊನಾ ಪಾಸಿಟಿವ್ ಪತ್ತೆ

ಗದಗ: ಜಿಲ್ಲೆಯಲ್ಲಿ ಭಾನುವಾರ ಒಂದು ವರ್ಷದ ಮಗು ಸೇರಿ ಒಟ್ಟು 13 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ.

ಹಾವೇರಿ ಜಿಲ್ಲೆ ಪ್ರವಾಸದ ಹಿನ್ನೆಲೆಯುಳ್ಳ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ 37 ವರ್ಷದ ಪುರುಷ ಸೋಂಕು ದೃಢಪಟ್ಟಿದೆ.

ಲಕ್ಷ್ಮೇಶ್ವರ ನಗರದ ದಾಸರ ಓಣಿ ನಿವಾಸಿ 24 ವರ್ಷದ ಸೋಂಕಿತ ಮಹಿಳೆ (ಪಿ-28940) ಸಂಪರ್ಕದಿಂದಾಗಿ ಅದೇ ಪ್ರದೇಶದ ನಿವಾಸಿ 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಬೆಳಗಾವಿ ಜಿಲ್ಲೆಯ ಸುರೇಬಾನ ಪ್ರವಾಸದ ಹಿನ್ನೆಲೆಯುಳ್ಳ ಗದಗ ತಾಲೂಕಿನ ಮುಳಗುಂದ ನಿವಾಸಿ 49 ವರ್ಷದ ಪುರುಷನಿಗೆ,

ಬೆಂಗಳೂರಿನ ಪ್ರವಾಸದ ಹಿನ್ನೆಲೆಯುಳ್ಳ ಗದಗ ತಾಲೂಕಿನ ಹರ್ತಿ ಗ್ರಾಮದ ನಿವಾಸಿಗಳಾದ 37 ವರ್ಷದ ಮಹಿಳೆ ಹಾಗೂ 38 ವರ್ಷದ ಪುರುಷನಿಗೆ, ಗದಗ ಬೆಟಗೇರಿ ಹುಡ್ಕೋ ಕಾಲನಿಯ ನಿವಾಸಿ 47 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು, ಸಂಪರ್ಕದ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ.

ಗದಗ ಬೆಟಗೇರಿ ನಗರದ ಬಸವೇಶ್ವರ ನಗರ ನಿವಾಸಿ 51 ವರ್ಷದ ಸೋಕಿತ ಮಹಿಳೆ (ಪಿ-31106) ಸಂಪರ್ಕದಿಂದಾಗಿ ನಗರದ ಶಹಪೂರ ಪೇಟೆಯ ನಿವಾಸಿ 26 ವರ್ಷದ ಪುರುಷನಿಗೆ, ಲಕ್ಷ್ಮೇಶ್ವರ ನಗರದ ದಾಸರ ಓಣಿ ನಿವಾಸಿ 24 ವರ್ಷದ ಸೋಂಕಿತ ಮಹಿಳೆ (ಪಿ-28940) ಸಂಪರ್ಕದಿಂದಾಗಿ ಅದೇ ಪ್ರದೇಶದ ನಿವಾಸಿ 1 ವರ್ಷದ ಮಗುವಿಗೆ, ಲಕ್ಷ್ಮೇಶ್ವರದ ಇಂದಿರಾ ನಗರ ನಿವಾಸಿ 41 ವರ್ಷದ ಸೋಂಕಿತ ಮಹಿಳೆ (ಪಿ-18285) ಸಂಪರ್ಕದಿಂದಾಗಿ ಗದಗ ತಾಲೂಕಿನ ನಾಗಾವಿಯ ಗಾಳೆಮ್ಮನ ಗುಡಿ ನಿವಾಸಿಗಳಾದ 32 ವರ್ಷದ ಪುರುಷ ಹಾಗೂ 4 ವರ್ಷದ ಬಾಲಕನಿಗೆ, ನರಗುಂದದ ಹೊರಕೇರಿ ಓಣಿ ನಿವಾಸಿ 19 ವರ್ಷದ ಯುವಕಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಬೆಂಗಳೂರು ಪ್ರವಾಸದ ಹಿನ್ನೆಲೆಯುಳ್ಳ ಶಿರಹಟ್ಟಿ ತಾಲೂಕಿನ ಗೊಜನೂರು ಗ್ರಾಮದ 33 ವರ್ಷದ ಪುರುಷ, ಗದಗ ಬೆಟಗೇರಿ ಕಾಗದಗಾರ ಓಣಿ ನಿವಾಸಿ 72 ವರ್ಷದ ಪುರುಷಗೆ ಸೋಂಕು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಯುವಕನ ಬಲಿ ಪಡೆದ ಕರೊನಾ

ಗದಗ: ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದ್ದು, ಸೋಂಕಿತ 21 ವರ್ಷದ ಯುವಕನೊಬ್ಬ ಭಾನುವಾರ ಮೃತಪಟ್ಟಿದ್ದಾನೆ.

ಮೃತ ಯುವಕ ನಗರದ ನಿವಾಸಿಯಾಗಿದ್ದಾನೆ. ಅಲ್ಲದೆ, ಈ ಯುವಕನ ತಂದೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಜಿಮ್ಸ್) ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೃತ ಯುವಕ ಮೂರ್ಛೆ ರೋಗ ಸೇರಿ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ. ಜುಲೈ 9ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಬಳಿಕ ಯುವಕನ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಜು.10 ರಂದು ಕರೊನಾ ಸೋಂಕು ದೃಢ ಪಟ್ಟಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯುವಕ ಭಾನುವಾರ ಮೃತಪಟ್ಟಿದ್ದಾನೆ ಎಂದು ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ. ಯುವಕ ಸೇರಿ ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಒಂಬತ್ತು ಜನ ಮೃತಪಟ್ಟಿದ್ದಾರೆ.

ಹದಿನೈದು ಪ್ರದೇಶಗಳು ಸಾಮಾನ್ಯ ವಲಯ

ಗದಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವರದಿಯನ್ವಯ ಜಿಲ್ಲೆಯ 15 ಪ್ರದೇಶಗಳನ್ನು ಕೋವಿಡ್-19 ಸೋಂಕು ನಿಯಂತ್ರಣ ಪ್ರತಿಬಂಧಿತ ಪ್ರದೇಶಗಳೆಂದು ಘೊಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಜಿಲ್ಲಾಧಿಕಾರಿ ಸುಂದರೇಶಬಾಬು ಆದೇಶ ಹೊರಡಿಸಿದ್ದಾರೆ.

ಗದಗ ಬೆಟಗೇರಿ ನಗರಸಭೆಯ ವಾರ್ಡ್ ಸಂಖ್ಯೆ 2 ಸೆಟ್ಲಮೆಂಟ್ ಪ್ರದೇಶ, ವಾರ್ಡ್ ಸಂಖ್ಯೆ 35ರ ಸಿದ್ಧರಾಮೇಶ್ವರ ನಗರ, ಗದಗ ತಾಲೂಕು ಹರ್ತಿ ಗ್ರಾಮ ವಾರ್ಡ್ ಸಂಖ್ಯೆ 3 ಹೊರಪೇಟೆ, ಯಲಿಶಿರೂರ ಗ್ರಾಮ ಪಂಚಾಯಿತಿ ವಾರ್ಡ್ ಸಂಖ್ಯೆ 2, ಅಸುಂಡಿ ಗ್ರಾಮ ಪಂಚಾಯಿತಿ ವಾರ್ಡ್ ಸಂಖ್ಯೆ 2ರ ಮಲ್ಲಸಮುದ್ರದ ಎಸ್.ಬಿ.ಪಾಟೀಲ ಬಡಾವಣೆ, ಮುಂಡರಗಿ ಪುರಸಭೆ ವಾರ್ಡ್ ಸಂಖ್ಯೆ 15 ನೇಕಾರ ಓಣಿ, ಮುಂಡರಗಿ ತಾಲೂಕು ಡಂಬಳ ಗ್ರಾಮ, ಶಿರಹಟ್ಟಿ ಪಟ್ಟಣ ಪಂಚಾಯಿತಿ ವಾರ್ಡ್ ಸಂಖ್ಯೆ 6ರ ಬಜಾರ ರಸ್ತೆ, ಮಾರುತಿ ದೇವಸ್ಥಾನ ಕನ್ನಡ ಶಾಲೆ ಹತ್ತಿರ; ವಾರ್ಡ್ ಸಂಖ್ಯೆ 9ರ ಬಜಾರ ರಸ್ತೆ ಅಶ್ವಿನಿ ಹೆಲ್ತ್ ಸೆಂಟರ್ ಹತ್ತಿರ, ವಾರ್ಡ್ ಸಂಖ್ಯೆ 4 ಮ್ಯಾಗೇರಿ ಓಣಿ, ಶಿರಹಟ್ಟಿ ತಾಲೂಕು ಬನ್ನಿಕೊಪ್ಪ, ಛಬ್ಬಿ ಗ್ರಾಮ, ರೋಣ ತಾಲೂಕು ಮೆಣಸಗಿ, ಬೆಳವಣಕಿ, ಲಕ್ಷ್ಮೇಶ್ವರ ತಾಲೂಕು ಬಾಲೇಹೊಸೂರ ಗ್ರಾಮದ ಘಂಟಿಚೋರ ಓಣಿ ಪ್ರದೇಶವನ್ನು ಸಾಮಾನ್ಯ ವಲಯ ಎಂದು ಘೊಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಟೇನ್ಮೆಂಟ್ ಪ್ರದೇಶಗಳು: ಜಿಲ್ಲೆಯ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಈ ವರೆಗೆ ಜಿಲ್ಲೆಯಲ್ಲಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ 100 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೊಷಿಸಲಾಗಿದೆ. ಇವುಗಳ ಪೈಕಿ ರಾಜ್ಯ ಸರ್ಕಾರದ ನಿರ್ದೇಶನದಂತೆ ನಿಗದಿತ ಅವಧಿಯ ನಂತರ ಈ ಪ್ರದೇಶಗಳಲ್ಲಿ ಯಾವುದೇ ಹೊಸ ಸಕಾರಾತ್ಮಕ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನೀಡಿರುವ ವರದಿಗಳನ್ವಯ 41 ಪ್ರದೇಶಗಳನ್ನು ಸಾಮಾನ್ಯ ಪ್ರದೇಶಗಳೆಂದು ಬದಲಾವಣೆಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ 59 ಸಕ್ರಿಯ ನಿರ್ಬಂಧಿತ ಪ್ರದೇಶಗಳಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.