ಹಾವೇರಿ: ಜಿಲ್ಲೆಯಲ್ಲಿ ಕರೊನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದು ಶನಿವಾರ ಇಬ್ಬರು ಪೊಲೀಸ್ ಪೇದೆಗಳು, ಇಬ್ಬರು ಗರ್ಭಿಣಿಯರು, ಹಾನಗಲ್ಲನ ಒರ್ವ ಉಪತಹಸೀಲ್ದಾರ್, ನ್ಯಾಯಾಲಯದ ಸ್ಟೈನೋಗ್ರಾಫರ್ ಸೇರಿ 13 ಜನರಿಗೆ ಪಾಸಿಟಿವ್ ವರದಿ ಬಂದಿದೆ.
ಇಂದಿನ 13 ಪ್ರಕರಣ ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 288ಕ್ಕೇರಿದೆ. ಇಂದಿನ 18 ಜನ ಸೇರಿ ಈವರೆಗೆ 134 ಜನರು ಗುಣವಾಗಿದ್ದು, 150 ಪ್ರಕರಣ ಸಕ್ರಿಯವಾಗಿವೆ. ಕನವಳ್ಳಿಯ 45 ವರ್ಷದ ಒರ್ವ ಮಹಿಳೆ ಮೃತಪಟ್ಟಿದ್ದಾಳೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಮೃತರ ಸಂಖ್ಯೆ 4ಕ್ಕೇರಿದೆ.
ಇಂದಿನ ಸೋಂಕಿತರಲ್ಲಿ ಬ್ಯಾಡಗಿ ತಾಲೂಕಿನಲ್ಲಿ 6, ಹಾವೇರಿ ತಾಲೂಕಿನಲ್ಲಿ 4, ಹಾನಗಲ್ಲ ತಾಲೂಕಿನಲ್ಲಿ 2, ಶಿಗ್ಗಾಂವಿ ತಾಲೂಕಿನಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದೆ. ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ 45 ವರ್ಷದ ಮಹಿಳೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಳು. ಕಿಡ್ನಿ ಸಮಸ್ಯೆಯ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ಚಿಕಿತ್ಸೆ ಪಡೆದು, ನಂತರ ಹಾವೇರಿ ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಿಸಲಾಗಿದ್ದಳು. ಸ್ವ್ಯಾಬ್ ಟೆಸ್ಟ್ನ ವರದಿ ಜು. 10ರಂದು ಪಾಸಿಟಿವ್ ಬಂದಿದ್ದು, ಅದೇ ದಿನ ಮೃತಪಟ್ಟಿದ್ದಾಳೆ. ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಎಡಿಸಿ ಎಂ. ಯೋಗೇಶ್ವರ ತಿಳಿಸಿದ್ದಾರೆ.
ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರ ಛತ್ರ ಬಳಿಯ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಾಗಿ ಜಾರ್ಖಂಡ್ ರಾಜ್ಯದಿಂದ ಬಂದಿದ್ದ 35 ವರ್ಷದ ಪುರುಷ ಜ್ವರದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ. ಜು. 7ರಂದು ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಜು. 10ರಂದು ಪಾಸಿಟಿವ್ ಬಂದಿದೆ. ಈತ ಛತ್ರದ ಬಳಿ ಶೆಡ್ನಲ್ಲಿ ವಾಸಿಸುತ್ತಿದ್ದ ಆ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಇನ್ನು ಕಾಗಿನೆಲೆ ಗ್ರಾಮದ ನಿವಾಸಿಗಳಾಗಿರುವ 27ವರ್ಷದ ಮಹಿಳೆ, 37ವರ್ಷದ ಪುರುಷ, 32ವರ್ಷದ ಪುರುಷ, 6 ವರ್ಷದ ಬಾಲಕಿ ಸೇರಿ ನಾಲ್ವರು ಜು. 6ರಂದು ಮುಂಬೈನ ಖಾಕಿನಾಕಾದಿಂದ ರೈಲಿನ ಮೂಲಕ ಬಂದಿದ್ದರು. ಇವರ ಸ್ವ್ಯಾಬ್ ಟೆಸ್ಟ್ ಮಾಡಿ ಕ್ವಾರಂಟೈನ್ ಮಾಡಲಾಗಿತ್ತು. ಜು. 10ರಂದು ಪಾಸಿಟಿವ್ ಬಂದಿದೆ. ಬ್ಯಾಡಗಿ ತಾಲೂಕಿನ ಕಳಲಕೊಂಡ ಗ್ರಾಮದ ನಿವಾಸಿ, ಹಾನಗಲ್ಲ ಸಿವಿಲ್ ನ್ಯಾಯಾಲಯದಲ್ಲಿ ಸ್ಟೈನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಜು. 5ರಂದು ಬೆಂಗಳೂರಿಗೆ ಹೋಗಿ ಬಂದಿದ್ದ. ಜ್ವರದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದಾಗ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಸೋಂಕಿತನ ಸ್ವಗ್ರಾಮ ಕಳಲಕೊಂಡ ಹಾಗೂ ಅವನು ಕೆಲಸ ಮಾಡುತ್ತಿದ್ದ ಹಾನಗಲ್ಲ ಸಿವಿಲ್ ನ್ಯಾಯಾಲಯ ಸೀಲ್ಡೌನ್ ಮಾಡಲಾಗಿದೆ. ಪ್ರಾಥಮಿಕ ಸಂರ್ಪತ 14 ಜನ ನ್ಯಾಯಾಲಯದ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಕಾನ್ಸಟೇಬಲ್ ಎಂದು ಕರ್ತವ್ಯ ನಿರ್ವಹಿಸುತ್ತಿದ್ದ, ಪೊಲೀಸ್ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದ 31 ವರ್ಷದ ಪುರುಷ, ಹಾಗೂ ಸವಣೂರ ಪೊಲೀಸ್ ಠಾಣೆಯಲ್ಲಿ ಕಾನ್ಸಟೇಬಲ್ ಹಾಗೂ ಗುತ್ತಲದ ಚಿದಂಬರ ಓಣಿಯ ನಿವಾಸಿಯಾಗಿರುವ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಗುತ್ತಲದ ಚಿದಂಬರ ಓಣಿ ಹಾಗೂ ಹಾವೇರಿ ಪೊಲೀಸ್ ಕ್ವಾರ್ಟರ್ಸ್ ಅನ್ನು ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ಹಾವೇರಿಯ ವಿದ್ಯಾನಗರದ ಉರ್ದು ಶಾಲೆಯ ಬಳಿಯ ನಿವಾಸಿ ಹಾಗೂ ಹಾನಗಲ್ಲ ತಾಲೂಕು ಕಚೇರಿ ಉಪತಹಸೀಲ್ದಾರ್ 38 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಇವರ ಮನೆಯ ಸುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ.
ಹಾನಗಲ್ಲ ತಾಲೂಕಿನ ಅಕ್ಕಿಆಲೂರ ಪ್ಯಾಟಿ ಓಣಿಯ 21 ವರ್ಷದ ಗರ್ಭಿಣಿಗೆ ಸೋಂಕು ತಗುಲಿದೆ. ನಿಗದಿತ ತಪಾಸಣೆಯ ಸಮಯದಲ್ಲಿ ಸ್ವ್ಯಾಬ್ ಟೆಸ್ಟ್ಗೆ ಕಳಿಸಲಾಗಿತ್ತು. ಜು. 10ರಂದು ಪಾಸಿಟಿವ್ ಬಂದಿದೆ. ಪ್ಯಾಟಿ ಓಣಿಯನ್ನು ಕಂಟೇನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಹಾನಗಲ್ಲ ಪಟ್ಟಣದ ಮಕ್ಬುಲ್ ನಗರದ 30 ವರ್ಷದ ಗರ್ಭಿಣಿಗೆ ಸೋಂಕು ತಗುಲಿದೆ. ನಿಗದಿತ ತಪಾಸಣೆ ವೇಳೆ ಸ್ವ್ಯಾಬ್ ಟೆಸ್ಟ್ ಮಾಡಿಸಲಾಗಿತ್ತು. ಜು. 10ರಂದು ಪಾಸಿಟಿವ್ ಬಂದಿದೆ. ಮಕ್ಬುಲ್ ನಗರದ 100 ಮೀಟರ್ ಪ್ರದೇಶ ಸೀಲ್ಡೌನ್ ಮಾಡಲಾಗಿದೆ.
ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ 74 ವರ್ಷದ ಮಹಿಳೆ ಗಾಲ್ ಬ್ಲಾಡರ್ ಸಮಸ್ಯೆಯಿಂದ ಧಾರವಾಡ ಎಸ್ಡಿಎಂಗೆ ತೆರಳಿದ್ದಳು. ಆಗ ಕಿಮ್ಸ್ನಲ್ಲಿ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಜು. 10ರಂದು ಪಾಸಿಟಿವ್ ಬಂದಿದ್ದರಿಂದ ಚಿಕಿತ್ಸೆಗಾಗಿ ಹಾವೇರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ವಾಸಿಸುತ್ತಿದ್ದ ತಡಸ ಗ್ರಾಮದಲ್ಲಿನ 100 ಮೀಟರ್ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ತಡಸ ಗ್ರಾಮವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ.
ಶನಿವಾರ ಜಿಲ್ಲೆಯ ಹಾನಗಲ್ಲ ತಾಲೂಕಿನ 6, ಹಾವೇರಿ ತಾಲೂಕಿನ 5, ಹಿರೇಕೆರೂರ ತಾಲೂಕಿನ 3, ಸವಣೂರ ತಾಲೂಕಿನ 2, ಶಿಗ್ಗಾಂವಿ ಹಾಗೂ ರಾಣೆಬೆನ್ನೂರ ತಾಲೂಕಿನ ತಲಾ ಒಬ್ಬರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.