ಮೈಸೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಪ್ರಾಥಮಿಕ ಹಂತದ ಪರೀಕ್ಷೆಗಳು ಭಾನುವಾರ ನಗರದ 13 ಕೇಂದ್ರದಲ್ಲಿ ಸುಸೂತ್ರವಾಗಿ ನೆರವೇರಿತು.
ಕಳೆದ ವರ್ಷ ನಡೆದಿದ್ದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಗರದ ಅಭ್ಯರ್ಥಿಗಳು ಉತ್ತೀರ್ಣರಾಗಿ ರ‌್ಯಾಂಕ್ ಪಡೆದಿರುವುದರಿಂದ ಇನ್ನಷ್ಟು ಅಭ್ಯರ್ಥಿಗಳು ಉತ್ಸುಕತೆಯಿಂದ ಪರೀಕ್ಷೆಗೆ ಹಾಜರಾಗಿದ್ದರು.
ಮಹಾರಾಣಿ, ಮರಿಮಲ್ಲಪ್ಪ, ಸದ್ವಿದ್ಯಾ, ವಿದ್ಯಾವರ್ಧಕ, ಮಹಾರಾಜ, ಡಿ.ಬನುಮಯ್ಯ, ಮಹಾಜನ, ವಿಜಯವಿಠಲ, ಟೆರಿಷಿಯನ್ ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ನೋಂದಣಿ ಅಗಿದ್ದ 5611 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಎರಡು ವಿಷಯದಲ್ಲಿ ನಡೆದ ಪರೀಕ್ಷೆಗಳು ಬೆಳಗ್ಗೆ 9.30ರಿಂದ 11.30ರವರೆಗೆ ಜನರಲ್ ಸ್ಟಡೀಸ್ ಮತ್ತು ಮಧ್ಯಾಹ್ನ 2.30ರಿಂದ 4.30 ಗಂಟೆವರೆಗೆ ಸಿವಿಲ್ ಸರ್ವಿಸಸ್ ಆಪ್ಟಿಟ್ಯೂಡ್ ಟೆಸ್ಟ್ ವಿಷಯಗಳ ಪರೀಕ್ಷೆ ಜರುಗಿತು.
ಎಲ್ಲ ಪರೀಕ್ಷಾ ಕೇಂದ್ರದ ಸುತ್ತ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಸೆಕ್ಷನ್ 144 ಅಡಿ ನಿಷೇದಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಕಮೀಷನರ್ ಬಿ.ರಮೇಶ್ ಆದೇಶ ಹೊರಡಿಸಿದ್ದರು. ಭದ್ರತೆಗಾಗಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿತ್ತು.
ಅಭ್ಯರ್ಥಿಗಳು ಮೊಬೈಲ್ ೆನ್, ಬ್ಲೂಟೂತ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿತ್ತು. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ನಿಗಾ ಇಡಲು ಪ್ರತಿ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಇಡಲಾಗಿತ್ತು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಮೇಲ್ವಿಚಾರಣೆಯಲ್ಲಿ ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಿಂದ ತರುವ ಹಾಗೂ ತಲುಪಿಸುವ ಕಾರ್ಯ ಯಶಸ್ವಿಯಾಗಿ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.