ಚಿತ್ರದುರ್ಗ: ಆಶ್ರಯ ಬಡಾವಣೆಯಲ್ಲೂ ವಾಂತಿ-ಭೇದಿ ಪ್ರಕರಣ ಕಂಡು ಬಂದಿದ್ದು, ಅಸ್ವಸ್ಥರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮೂವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವುದು ಶುಕ್ರವಾರ ಬೆಳಕಿಗೆ ಬಂದಿದೆ.
ಬಡಾವಣೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಉಳಿದ 10 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಎರಡು ದಿನದ ಹಿಂದೆಯಷ್ಟೇ ವಾಂತಿ-ಭೇದಿ ವರದಿಯಾದ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿ, ವೈದ್ಯರು, ಶುಶ್ರೂಷಕರ ತಂಡ ಬೀಡುಬಿಟ್ಟಿದೆ. ಆಂಬುಲೆನ್ಸ್, ಔಷಧ ಒಳಗೊಂಡು ಅಗತ್ಯ ಮುಂಜಾಗ್ರತಾ ಕ್ರಮವನ್ನು ಆರೋಗ್ಯ ಇಲಾಖೆ ಕೈಗೊಂಡಿದೆ.
ಮಾರುತಿ ನಗರದ ಪಿಎಚ್‌ಸಿ ಕೇಂದ್ರದ ವೈದ್ಯಾಧಿಕಾರಿ ಎರಡು ದಿನದ ಹಿಂದೆ ನೀಡಿದ ಮಾಹಿತಿ ಆಧರಿಸಿ ತಕ್ಷಣ ಜಿಲ್ಲಾ ಸರ್ವೇಕ್ಷಣಾ ಘಟಕ ಆರ್‌ಆರ್‌ಟಿ ತಂಡ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದೆ. ಗ್ರಾಮದಲ್ಲಿ ತಲಾ 1 ಕೊಳವೆಬಾವಿ, ಓವರ್ ಹೆಡ್ ಟ್ಯಾಂಕ್ ಇದ್ದು, ಈಗಾಗಲೇ ಮನೆ-ಮನೆ ಸರ್ವೇ ಕೈಗೊಂಡಿದ್ದು, ಬಡಾವಣೆ ಮತ್ತು ವೈಯಕ್ತಿಕ ಸ್ವಚ್ಛತೆ, ಕುದಿಸಿ ಆರಿಸಿದ ನೀರು ಹಾಗೂ ಶುದ್ಧ ಆಹಾರ ಸೇವನೆ ಒಳಗೊಂಡು ಆರೋಗ್ಯ ಶಿಕ್ಷಣ ನೀಡಲಾಗಿದೆ ಎಂದು ಡಿಎಚ್‌ಒ ಡಾ.ಆರ್.ರಂಗನಾಥ್ ತಿಳಿಸಿದ್ದಾರೆ.
ರೋಗ ಪತ್ತೆಗಾಗಿ 3 ನೀರಿನ, ಇಬ್ಬರ ಮಲದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮನೆಗಳಿಗೆ ತೆರಳಿ ಸಮೀಕ್ಷೆ ಕೈಗೊಂಡಿದ್ದು, ವಾಂತಿ-ಭೇದಿ ಕಾಣಿಸಿಕೊಂಡವರಿಗೆ ತಾತ್ಕಾಲಿಕ ಚಿಕಿತ್ಸಾಲಯಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಗೆ ಪೂರೈಕೆಯಾಗುವ ನೀರಿನ ಮೂಲದ ಪರಿಶೀಲನೆ, ಪೈಪ್‌ಲೈನ್‌ಗಳಲ್ಲಿ ಸೋರಿಕೆ ಗುರುತಿಸಿ, ದುರಸ್ತಿಪಡಿಸಲು ನೀರಗಂಟಿಗೆ, ಚರಂಡಿಗಳಲ್ಲಿ ನಿಂತ ನೀರನ್ನು ಬ್ಲೀಚಿಂಗ್ ಪೌಡರ್‌ನಿಂದ ಶುಚಿಗೊಳಿಸಲು ಪೌರಕಾರ್ಮಿಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕವಾಡಿಗರಹಟ್ಟಿಯ ಇಬ್ಬರು ಆಸ್ಪತ್ರೆಗೆ ದಾಖಲು: ಕವಾಡಿಗರಹಟ್ಟಿಯಲ್ಲಿ ಮತ್ತಿಬ್ಬರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂಲಕ ಅಸ್ವಸ್ಥರ ಸಂಖ್ಯೆ 237ಕ್ಕೆ ಏರಿಕೆಯಾಗಿದ್ದು, ಈವರೆಗೂ 229 ಮಂದಿ ಗುಣವಾಗಿದ್ದಾರೆ. ಮುದ್ದಾಪುರ ಹೊಸಹಟ್ಟಿಯಲ್ಲಿ ಒಬ್ಬರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 21 ಪ್ರಕರಣಗಳ ಪೈಕಿ 17 ಮಂದಿ ಗುಣವಾಗಿದ್ದಾರೆ.