ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಸೋಮವಾರ ಪಲ್ಟಿಯಾಗಿರುವ ಮಿನಿಬಸ್. 
ಜಿಲ್ಲೆ

ಮಿನಿಬಸ್ ಉರುಳಿ 13 ಜನರಿಗೆ ಗಾಯ

ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಚೈನ್‌ಗೇಟ್ ಬಳಿಯ ತಿರುವಿನಲ್ಲಿ ಸೋಮವಾರ ಬೆಳಗ್ಗೆ ನಡೆದ ಮಿನಿಬಸ್ ಪಲ್ಟಿಯಾಗಿ 13 ಜನರು ಗಾಯಗೊಂಡಿದ್ದಾರೆ.

ಗಾಯಗೊಂಡವರೆಲ್ಲ ತುಮಕೂರಿನವರು ಎಂದು ತಿಳಿದು ಬಂದಿದೆ. 16 ಜನ ಮಹಿಳೆಯರು, ಒಬ್ಬ ಚಾಲಕ, ಒಬ್ಬ ಸಹಾಯಕ ಸೇರಿ ಒಟ್ಟು 18 ಜನ ಬಸ್‌ನಲ್ಲಿದ್ದರು.ಇವರೆಲ್ಲರೂ ಪ್ರವಾಸಕ್ಕೆ ತುಮಕೂರಿನಿಂದ ಬಿಳಿಗಿರಿರಂಗನಬೆಟ್ಟಕ್ಕೆ ಬಂದಿದ್ದರು.

ದೇವರ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ, ಚೈನ್‌ಗೇಟ್‌ನ ಬಳಿ ಇರುವ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಿನಿಬಸ್ ಪಲ್ಟಿಯಾಗಿದೆ.

ಚಾಲಕ ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಆಂಬುಲೆನ್ಸ್, ಪೊಲೀಸರ ಗಸ್ತು ವಾಹನ ಹಾಗೂ ಸ್ಥಳೀಯರ ವಾಹನಗಳ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ತೀವ್ರವಾಗಿ ಗಾಯಗೊಂಡ ಚಂದನಾ, ಸುಮಾ, ಸಂಧ್ಯಾ ಸೇರಿದಂತೆ ಆರು ಜನರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್‌ಪಿ ಧರ್ಮೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಪ್ಪಿದ ಭಾರೀ ಅನಾಹುತ: ಈ ತಿರುವಿನಲ್ಲಿ ಆಗಾಗ ಅಪಘಾತಗಳು ನಡೆಯುತ್ತಲೇ ಇರುತ್ತದೆ. ಇಲ್ಲಿ ಯಾವ ಬ್ಯಾರಿಕೇಡ್ ಅನ್ನು ಹಾಕಿಲ್ಲ. ರಸ್ತೆಯೂ ತುಂಬಾ ಕಿರಿದಾಗಿದೆ. ಕಡಿದಾದ ರಸ್ತೆಯಲ್ಲಿ ವಾಹನ ಚಾಲನೆ ಸವಾಲಿನ ಕೆಲಸ. ಎದುರಿಂದ ಮತ್ತೊಂದು ವಾಹನ ಬಂದರೆ ವಾಹನ ಚಾಲನೆ ಕಷ್ಟವಾಗುತ್ತದೆ. ಒಂದು ವೇಳೆ ವೇಗವಾಗಿ ಬಸ್ ಚಲಿಸಿದ್ದರೆ ಬಸ್ ಪ್ರಪಾತಕ್ಕೆ ಬೀಳುವ ಅಪಾಯ ಇತ್ತು. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದಂತಾಗಿದೆ. ರಸ್ತೆ ವಿಸ್ತರಿಸಿ, ಬ್ಯಾರಿಕೇಡ್ , ಸೂಚನಾ ಫಲಕ ಅಳಡಿಸಿ ಸಂಭನೀಯ ಅಪಘಾತ ತಪ್ಪಿಸಬೇಕೆಂಬುದು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.