ಕೊಳ್ಳೇಗಾಲ: ಬೇಲಿಯಲ್ಲಿ ಬೆಳೆಯುವ ಮರಳಕಾಯಿ ಸೇವಿಸಿ 8 ಮಕ್ಕಳನ್ನು ಸೇರಿದಂತೆ 13 ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಣಿಕೇರಿ ತಾಂಡದ ನಿವಾಸಿಗಳಾದ ಅನುಷಾ (11), ವೆಂಕಟೇಶ್ (6), ಅಂಕಿತಾ (10), ಪ್ರೀತಂ (4), ಪ್ರೀತಂ (4) ಪವನ್ (8) ಅರ್ಜುನ (10) ಯುವರಾಜ (4) ಭದ್ರಿಬಾಯಿ(35), ಸೀತಾಬಾಯಿ(40), ಲಕ್ಷ್ಮೀ (35), ಲಲಿತಾ ಬಾಯಿ(45), ಸರಸ್ವತಿ ಬಾಯಿ (40) ಚಿಕಿತ್ಸೆಗಾಗಿ ಪಡೆಯುತ್ತಿರುವವರು.
ಕಬ್ಬು ಕಟಾವು ಕಾರ್ಮಿಕರಾಗಿ ಕೊಪ್ಪಳದಿಂದ 9 ಕುಟುಂಬಗಳು ಗುಂಪಾಗಿ ಕಳೆದ 1 ತಿಂಗಳ ಹಿಂದೆ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನಲ್ಲಿ ವಾಸವಿದೆ. ಮಕ್ಕಳು ಸೇರಿದಂತೆ ಸುಮಾರು 30 ಜನರು ಇದ್ದು. ಕಬ್ಬು ಕಟಾವು ವೃತ್ತಿ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಆದರೆ, ಬುಧವಾರ ಈ ಗುಂಪಿನ ಬಾಲಕಿ ಅನುಷಾ(11) ಆಟವಾಡುವ ಸಂದರ್ಭದಲ್ಲಿ ಬೇಲಿಯಲ್ಲಿ ಬೆಳೆದಿದ್ದ ಮರಳಕಾಯಿಯನ್ನು ತಿಂದಿದ್ದಾಳೆ. ಈ ವೇಳೆ ತಿನ್ನಲು ರುಚಿಕರವಾಗಿದೆ ಎಂದು ತನ್ನೊಂದಿಗಿದ್ದ ಮಕ್ಕಳು ಹಾಗೂ ಪಾಲಕರಿಗೂ ನೀಡಿದ್ದಾಳೆ. ಬಾಲಕಿ ಕೊಟ್ಟದನ್ನು 13 ಜನರೂ ತಿಂದಿದ್ದಾರೆ. ಸ್ವಲ್ಪ ಸಮಯದ ನಂತರ, ಎಲ್ಲರಿಗೂ ವಾಂತಿ, ಭೇದಿ ಕಾಣಿಸಿಕೊಂಡಿದೆ. ಗಾಬರಿಗೊಂಡ ಗುಂಪಿನಲ್ಲಿದ್ದ ಉಮೇಶ್, ಕುಬೇರ್ ನಾಯಕ ಹಾಗೂ ಇತರರು ಅಸ್ವಸ್ಥರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ವ್ಯೆದ್ಯರಾದ ಡಾ.ವೈಭವ್, ಡಾ.ಸೌಮ್ಯಾ, ಡಾ.ಶ್ರುತಿ ಅವರು ಅಸ್ವಸ್ಥರಿಗೆ ಚಿಕಿತ್ಸೆ ನೀಡಿದ್ದಾರೆ. 4 ವರ್ಷದ ಯುವರಾಜ ಎಂಬ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.