ಜಿಲ್ಲೆ

13 ಜೋಡಿಗಳನ್ನು ಒಂದುಗೂಡಿಸಿದ ಅದಾಲತ್

ಎನ್.ವೆಂಕಟೇಶ್

ವ್ಯಾಜ್ಯಪೂರ್ವ 82,969 ಪ್ರಕರಣಗಳು ಇತ್ಯರ್ಥ

14.64 ಕೋಟಿ ರೂ. ವಸೂಲಿ

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 88,279 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ರಾಜೀ ಸಂಧಾನದ ಮೂಲಕ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 8407 ಪ್ರಕರಣಗಳ ಪೈಕಿ 5310 ಪ್ರಕರಣಗಳು, ವ್ಯಾಜ್ಯ ಪೂರ್ವ 82,969 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಅಣ್ಣ-ತಮ್ಮಂದಿರ ನಡುವೆ ಪಾಲು ವಿಭಾಗ, ರಸ್ತೆ ನಿಯಮ ಉಲ್ಲಂಘನೆ ದಂಡ, ಮರಳು ಕಳವು, ಬ್ಯಾಂಕ್ ಸಾಲ ಸೇರಿ ಹಲವು ಪ್ರಕರಣಗಳು ಬಗೆಹರಿದಿವೆ.
ಪ್ರಕರಣಗಳ ಇತ್ಯರ್ಥದಿಂದ 14,64,58,345 ರೂ. ವಸೂಲಾತಿಯಾಗಿದೆ. ಇನ್ನು ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಸಲ್ಲಿಸಿದ್ದ 13 ಜೋಡಿಗಳನ್ನು ರಾಜೀ ಸಂಧಾನದಲ್ಲಿ ಒಗ್ಗೂಡಿಸಲಾಯಿತು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪಾ ತಿಳಿಸಿದ್ದಾರೆ.
ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಉದ್ಯೋಗದಲ್ಲಿ ಪುನರ್ ಸ್ಥಾಪನೆ, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ ಹಾಗೂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಪ್ರಕರಣಗಳು, ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣಗಳು, ಚೆಕ್ಕು ಅವಾನ್ಯ, ಸಾಲ ವಸೂಲಾತಿ ನ್ಯಾಯಾಧಿಕರಣದ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ, ವಿದ್ಯುತ್ ಹಾಗೂ ನೀರಿನ ಶುಲ್ಕಗಳು ಸೇರಿದಂತೆ ವಿವಿಧ ಪ್ರಕರಣಗಳನ್ನು ಅದಾಲತ್‌ನಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಹಾಗೆಯೇ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ  ರಾಜಿ ಪಂಚಾಯಿತಿ ಮೂಲಕ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಇರುವ  ರಾಜಿಯಾಗಬಲ್ಲ ಪ್ರಕರಣಗಳನ್ನು ನಿಯಮಾನುಸಾರ ಇತ್ಯರ್ಥಪಡಿಸಲಾಗಿದೆ.
ಸೂಕ್ತ ಕಾನೂನು ಸಲಹೆ ಮತ್ತು ವಾರ್ಗದರ್ಶನ, ಪರಸ್ಪರ ಒಪ್ಪಿಗೆ ಇತ್ಯರ್ಥದ ತೀರ್ಮಾನದಿಂದ ಹಲವು ಪ್ರಕರಣಗಳ ವಿವಾದವು ಸುಖಾಂತ್ಯಗೊಂಡಿದೆ. ಹಾಗೆಯೇ ಕಕ್ಷಿದಾರರಿಗೆ ಹಣ, ಸಮಯ ಉಳಿತಾಯವಾಗಿದೆ.

ಕುಟುಂಬದಲ್ಲಿ ಮನಸ್ತಾಪ ಸಹಜ

ಗೌರಿಬಿದನೂರು: ನಗರದ ನ್ಯಾಯಾಲಯ ಅವರಣದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕೆಂದು ಬಂದಿದ್ದ ಮೂರು ದಂಪತಿಗಳನ್ನು ರಾಜಿ ಸಂಧಾನದ ಮೂಲಕ ನ್ಯಾಯಾಧೀಶರು ಒಂದೂಗೂಡಿಸಿದರು. ತಾಲೂಕು ಕಾನೂನು ಪ್ರಾಧಿಕಾರದಿಂದ ಆಯೋಜಿಸಿದ್ದ ಬೃಹತ್ ಲೋಕ ಅದಾಲತ್‌ನಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶೆ ಗೀತಾ ಕುಂಬಾರ್ ಮಾತನಾಡಿ, ಕುಟುಂಬದಲ್ಲಿ ಸಣ್ಣ ಪುಟ್ಟ ವಿಚಾರಗಳಲ್ಲಿ ಮನಸ್ತಾಪ ಇದ್ದೇ ಇರುತ್ತದೆ. ಅದನ್ನು ದೊಡ್ಡದು ಮಾಡಿಕೊಂಡು ನ್ಯಾಯಾಲಯದ ಮೆಟ್ಟೆಲೇರುವುದು ಸರಿಯಲ್ಲ. ಹಿರಿಯರ ಸಮ್ಮುಖದಲ್ಲಿ ಇತ್ಯರ್ಥ ಮಾಡಿಕೊಂಡರೆ ಬಾಳು ಸುಗಮವಾಗುತ್ತದೆ ಎಂದರು. ನ್ಯಾಯಾಲಯದಲ್ಲಿ ಬ್ಯಾಂಕ್ ಸಿವಿಲ್ ಚೆಕ್ ಕೇಸ್, ಕುಟುಂಬ ಇನ್ನಿತರೆ ಪ್ರಕರಣಗಳು ಸೇರಿ ಸುಮಾರು 1789 ಪ್ರಕರಣಗಳು ಇತ್ಯಾರ್ಥಗೊಂಡವು. ಲೋಕಾದಾಲತ್‌ನಲ್ಲಿ 1.69 ಲಕ್ಷ ರೂ. ಸಂಗ್ರಹವಾಯಿತು. ಪ್ರಧಾನ ನ್ಯಾಯಾಧೀಶ ಪಿ,ಎಂ,ಸಚಿನ್, ವಕೀಲರ ಸಂಘದ ಅಧ್ಯಕ್ಷ ದಿನೇಶ್, ಹಿರಿಯ ವಕೀಲ ಗೋಪಾಲ್, ಸಂದಾನಕಾರರಾದ ಹರೀಶ್, ಭಾರತಿ, ವಕೀಲರಾದ ಶ್ಯಾಮ್, ಹರ್ಷವರ್ಧನ್, ಎನ್.ಧನಂಜಯ್, ಜಗದೀಶ್, ಹಿರಿಯ ವಕೀಲರು ಮತ್ತು ನ್ಯಾಯಾಲಯ ಸಿಬ್ಬಂದಿ ಇದ್ದರು.