ಲಕ್ಕೂರು: ಮಾಲೂರಿನಲ್ಲಿ ಒಂಟಿ ಜೀವನ ನಡೆಸುತ್ತಿರುವ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಅವರಿಗೆ ಹತ್ತು ದಿನಗಳ ಹಿಂದೆ ಹೃದಯಾಘಾತವಾಗಿ, ಬೆಂಗಳೂರಿನಲ್ಲಿ ಸ್ಟಂಟ್ ಅಳವಡಿಸಲಾಗಿದ್ದು ಆಸ್ಪತ್ರೆಯ ಖರ್ಚು ಭರಿಸಿದ ನಂತರ ಹಣವಿಲ್ಲದೇ ಆ ಸ್ಥಿತಿಯಲ್ಲೇ ಸುಮಾರು 13 ಕಿ.ಮೀ. ದೂರ ನಡೆದುಕೊಂಡೇ ಹೋಗಬೇಕಾದ ಸಂಕಟ ಅನುಭವಿಸಿದ್ದಾರೆ.
ತಮ್ಮ ನೋವಿನ ಕಥನವನ್ನು ಹಾಗೂ ಸರ್ಕಾರದ ಅಲಕ್ಷ$್ಯವನ್ನು ಅವರು ಭಾನುವಾರ ವಿವರಿಸಿದ್ದಾರೆ. ಮಾಲೂರಿನಲ್ಲಿ ಒಂಟಿ ಜೀವನ ಮಾಡುತ್ತಿರುವೆ. ಕಳೆದ 10 ದಿನಗಳ ಹಿಂದೆ ಹೃದಯಘಾತವಾಯಿತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಬನ್ನೇರುಘಟ್ಟದ ಆ ಆಸ್ಪತ್ರೆಯಲ್ಲಿ ಆಪರೇಷನ್ ಮಾಡುವುದಾಗಿ ತಿಳಿಸಿ 6 ಲಕ್ಷ ರೂ. ಕಟ್ಟಿಸಿಕೊಂಡು ರಾತ್ರಿ 2 ಸ್ಟ್ಟಂಟ್ ಅಳವಡಿಸಿ, ಐಸಿಯುಗೆ ತಂದು ಹಾಕಿದರು. ರಾತ್ರಿಯೆಲ್ಲ್ಲ ಮಲೆಯಾಳಿಗಳ, ಹಿಂದಿಯವರ, ಇಂಗ್ಲಿಷ್ನವರ ಟ್ರೀಟ್ಮೆಂಟ್ಗೆ ಅನಾಥಪ್ರಜ್ಞೆಗೆ ಗುರಿಯಾಗಿ ನೆಲಕಚ್ಚಿಬಿಟ್ಟೆ. ಕಳೆದ ಸೋಮವಾರ ಬೆಳಗ್ಗೆ ಈ ಅನ್ಯ ಭಾಷಿಗರ ಹಿಂಸೆ ತಾಳಲಾರದೆ, ಆಘಾತದಿಂದ ನಲುಗಿ ಆಸ್ಪತ್ರೆಯಿಂದ ಹೊರಬಿದ್ದು, ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದೆ. ಅಲ್ಲಿಯ ಸಿಬ್ಬಂದಿ 2 ತಾಸು ಬೆಂಚಿನ ಮೇಲೆ ಕೂರಿಸಿ, ಆಮೇಲೆ ಸಬ್ಇನ್ಸ್ಪೆಕ್ಟರ್ ಸಂಜೆ ಬರುತ್ತಾರೆ ಎಂದು ಸಾಗ ಹಾಕಿದರು ಎಂದು ಹರಿಹರಪ್ರಿಯ ವಿವರಿಸಿದರು.
ಸ್ಟಂಟ್ ಹಾಕಿಸಿಕೊಂಡೇ ಇನ್ಫೆಂಟ್ರಿ ರಸ್ತೆವರೆಗೆ ನಡೆದ ಸಾಹಿತಿ
ಹೃದಯಕ್ಕೆ ಸ್ಟಂಟ್ ಹಾಕಿಕೊಂಡು ಏನು ಮಾಡಲೂ ದುಡ್ಡಿಲ್ಲದೆ ಪುಟ್ಟೇನಹಳ್ಳಿಯಿಂದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಾಣಲು, ಇನ್ಫೆಂಟ್ರಿ ರಸ್ತೆವರೆಗೂ ನಡೆದುಕೊಂಡೇ ಹೋದೆ. ಆದರೆ ಯಾರೊಬ್ಬರೂ ನೆರವಿಗೆ ಬರಲಿಲ್ಲ. ಆಪರೇಷನ್ ಆಗಿರುವ ಮನುಷ್ಯ ಠಾಣೆಯಲ್ಲಿ ಗಂಟೆಗಟ್ಟಲೆ ಕಾದು ಕುಳಿತ ಮೇಲೆ ಕಮಿಷನರ್ ರಜೆ ಎಂದರು. ಅಡಿಷನಲ್ ಕಮಿಷನರ್ ಸತೀಶ್ಗೆ ದೂರು ಸಲ್ಲಿಸಿದ ನಂತರ, ಮಗ ಆಸ್ಪತ್ರೆ ಹತ್ತಿರ ಹೋದಾಗ ಆಸ್ಪತ್ರೆಯವರು 1.78 ಲಕ್ಷ ರೂ. ಹೆಚ್ಚಾಗಿ ತಗೊಂಡಿದ್ದೇವೆ, ಹಿಂದಿರುಗಿಸುತ್ತೇವೆ ಎಂದರು. ಇದು ಈ ನಾಡಿನ ಒಬ್ಬ ಸಾಹಿತಿ, ಪುಸ್ತಕ ಪ್ರೇಮಿಯ ಪಡಿಪಾಟಲು. ಇದಕ್ಕೆ ಸಂಬಂಧಿಸಿಂತೆ ರಾಜ್ಯ ಹಾಗೂ ರಾಷ್ಟ್ರ ಆಳುವವರಲ್ಲಿ ಯಾರಾದರೂ ಹೃದಯವಂತರಿದ್ದರೆ, ಪರಿಸ್ಥಿತಿ ತಿಳಿದು ನೆರವಾಗಬಹುದೇ ಅಥವಾ ಸೂಕ್ತ ಕ್ರಮ ಕೈಗೊಳ್ಳಬಹುದೇ ಎಂದು ಎದುರು ನೋಡುತ್ತಲೇ ದಿನದೂಡುತ್ತಿದ್ದೇನೆ. ಕರ್ನಾಟಕದ ಪ್ರಸ್ತುತ ಸಾಂಸತಿಕ ಜನಜೀವನ ಎಷ್ಟು ಬರ್ಬರ ಎಂಬುದನ್ನು ನಾನು ಈ ಸಂದರ್ಭದಲ್ಲಿ ಸಮಾಜದ ಮುಂದೆ ಇಡುತ್ತಿರುವೆ ಎಂದು ಬೇಸರಿಸಿದರು.
"ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆ ಸೇರಿ ಒಂದು ವಾರ ಕಳೆದರೂ ಕನ್ನಡದ ಕಟ್ಟಾಳುಗಳು ಗಮನಿಸದೆ ಇರುವುದು ದುರಂತ. ನವೆಂಬರ್ ಬಂದರೆ ಎದೆ ತಟ್ಟ್ಟಿಕೊಂಡು ಕನ್ನಡ ಕನ್ನಡ ಎನ್ನುವ ಸಂಘಟನೆಗಳು ಸ್ಪಂದಿಸದೆ ಇರುವುದರಿಂದ ಬೇಸರವಾಗಿದೆ. ಮಾಲೂರು ಪಟ್ಟಣ ಗಡಿಭಾಗದಲ್ಲಿದ್ದರೂ ಕನ್ನಡಕ್ಕೆ ಬಹಳಷ್ಟು ಔದಾರ್ಯ ತೋರುವ ಹಾಗೂ ಶ್ರಮಿಸುತ್ತಿರುವ ಸ್ಥಳವಾಗಿದೆ ಎಂದು "ಪುಸ್ತಕಮನೆ' ಸ್ಥಾಪಿಸಿ ಕೋಟ್ಯಂತರ ರೂ. ಬೆಲೆ ಬಾಳುವ ಲಕ್ಷಾಂತರ ಪುಸ್ತಕಗಳನ್ನು ತಂದಿರಿಸಿದ್ದೇನೆ. ಆದರೆ ಜ್ಞಾನಪೀಠ ಪ್ರಶಸ್ತಿ ಪುರಸತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ತವರುಮನೆಯಾದ ತಾಲೂಕಿನಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತಾಗಿದೆ. ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿ ಸಹ ಇದುವರೆಗೂ ಪುಸ್ತಕಮನೆಯ ವಿಚಾರ ಮಾತನಾಡದಿರುವುದು ನೋವು ತಂದಿದೆ ಎನ್ನುತ್ತಾರೆ ಹರಿಹರ ಪ್ರಿಯ.
ಹರಿಹರಪ್ರಿಯ ಎಂದರೆ ಬ್ರಹ್ಮಾಂಡ, ಅವರು ಒಂದು ಜ್ಞಾನ ಭಂಡಾರ, ಸ್ನೇಹಕ್ಕೆ ಪ್ರಾಣ ಕೊಡುವ ಮನುಷ್ಯ, ಸ್ನೇಹ, ಪ್ರೀತಿ, ನೋವು, ಸಂಕಟ ಎಲ್ಲವನ್ನು ಅನುಭವಿಸಿರುವರನ್ನು ಸರ್ಕಾರ ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕು.
>ಡಾ.ಇಳಾ ವಿಜಯಾ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸತರು
ನಾಡಿನ ದೊಡ್ಡ ಲೇಖಕ, ಚಿಂತಕ ಹರಿಹರಪ್ರಿಯ ಅವರನ್ನು ಉಳಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ.
> ಮಲ್ಲೇಪುರಂ ಜಿ.ವೆಂಕಟೇಶ್, ಹಿರಿಯ ಸಾಹಿತಿ
ಕನ್ನಡದ ಖ್ಯಾತ ಸಾಹಿತಿ, ಸಂಸತಿ ಚಿಂತಕ, ಬರಹಗಾರ ಹಾಗೂ ಪುಸ್ತಕ ಮನೆಯ ಮೂಲಕ ಮನೆ ಮಾತಾದ ಹರಿಹರಪ್ರಿಯ ಅವರು ಅನಾರೋಗ್ಯ ಪೀಡಿತರಾಗಿ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿರುವುದು ವೇದನಾತ್ಮಕವಾಗಿದೆ. ಅಲ್ಲದೆ, ಶುಶ್ರೂಷೆಯ ಸಮಯದಲ್ಲಿ ವಿಭಿನ್ನ ಭಾಷಿಗರಿಂದ ಮಾನಸಿಕವಾಗಿ ಹಿಂಸೆ ಪಟ್ಟಿರುವುದು ಮನಕಲಕುವಂತಾಗಿದೆ.
> ಡಾ.ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಹರಿಹರಪ್ರಿಯ ಅವರು ನಾಡಿನ ಆಸ್ತಿ. ಅವರನ್ನು ಕನ್ನಡಿಗರು ಉಳಿಸಿಕೊಳ್ಳಬೇಕು. ಅವರ ಪುಸ್ತಕ ಭಂಡಾರವನ್ನು ಸಂಶೋಧನಾ ಕೇಂದ್ರವನ್ನಾಗಿ ಬಳಕೆ ಮಾಡಿಕೊಳ್ಳಬೇಕು.
> ಕುಂ.ವೀರಭದ್ರಪ್ಪ, ಸಾಹಿತಿ
ಅಪಾರವಾದ ಮೌಲ್ಯಯುತ ಹಾಗೂ ಅಪರೂಪದ ಗ್ರಂಥರಾಶಿಯನ್ನು ರಕ್ಷಣೆ ಮಾಡಲು ಸರ್ಕಾರ ಮುಂದೆ ಬರಬೇಕು. ಹರಿಹರಪ್ರಿಯ ಅವರ ಸಂಗ್ರಹ ವಿಶ್ವಕೋಶವಾಗಿದ್ದು, ಸಂಶೋಧನಾ ಕೇಂದ್ರಗಳಿಗೆ ಬೇಕಾದಷ್ಟು ಸಾಹಿತ್ಯವಿದೆ. ಸಾಹಿತಿ ಹರಿಹರಪ್ರಿಯ ಅವರು ಲಕ್ಷಾಂತರ ಪುಸ್ತಕಗಳನ್ನು ಓದಿ ಜೀರ್ಣಿಸಿಕೊಂಡಿರುವ ವ್ಯಕ್ತಿಯಾಗಿದ್ದಾರೆ. ಅವರನ್ನು ಹಾಗೂ ಪುಸ್ತಕಮನೆಯನ್ನು ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಬೇಕು.
> ಲಕ್ಷ್ಮಣ ಕೊಡಸೆ, ಹಿರಿಯ ಪ್ರತಕರ್ತ