ಭಟ್ಕಳ: ಭಾನುವಾರ ಅಕ್ರಮ ಸಾಗಾಟದ ನಾಲ್ಕು ಜಾನುವಾರು ರಕ್ಷಿಸಿದ್ದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು, ಸೋಮವಾರ ಕಸಾಯಿಖಾನೆಗೆ ಸಾಗಿಸಲು ಮಹಾರಾಷ್ಟ›ದಿಂದ ಭಟ್ಕಳಕ್ಕೆ ಬರುತ್ತಿದ್ದ 13 ಜಾನುವಾರು ರಕ್ಷಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಸಹಿತ ಒಬ್ಬನನ್ನು ಬಂಧಿಸಿರುವ ಪೊಲೀಸರು, ಮೂವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಔರಂಗಾಬಾದ್ ಜಿಲ್ಲೆಯ ಜಮೀಲ್ ಯೂಸುಫ್ ಶೇಖ್ (49) ಬಂಧಿತ. ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿ ಲಾರಿ ತಡೆಹಿಡಿದ ಪೊಲೀಸರು ಪರಿಶೀಲಿಸಿದಾಗ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 9 ಎತ್ತು ಮತ್ತು 4 ಕೋಣಗಳನ್ನು ರಕ್ಷಿಸಿದ್ದಾರೆ. ಇವು ಮಹರಾಷ್ಟ್ರದ ಪಾಲೆಗಾಂವ್ನಿಂದ ಭಟ್ಕಳಕ್ಕೆ ಬರುತ್ತಿದ್ದವು ಎನ್ನಲಾಗಿದೆ. ಸಾಗಾಟಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲಾತಿ ಸಿಕ್ಕಿಲ್ಲ. ಇವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಿಂದು ಜಾಗರಣಾ ವೇದಿಕೆ ಮತ್ತು ಬಿಜೆಪಿ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಡಿವೈಎಸ್ಪಿ ಮಹೇಶ ಕೆ.ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಪಿಎಸ್ಐ ರನ್ನ ಗೌಡ ಪಾಟೀಲ ಮತ್ತು ಭರ್ಮಪ್ಪ ಬೆಳಗಲಿ ನೇತೃತ್ವದಲ್ಲಿ ಎಎಸ್ಐ ಕೃಷ್ಣಾನಂದ ನಾಯ್ಕ, ಪಿಸಿ ಬಸವರಾಜ ಡಿ.ಕೆ., ಮೋಹನ ಕಬ್ಬೇರ, ವೀರಣ್ಣ ಬಳ್ಳಾರಿ, ಲೋಹಿತ್ ಕುಮಾರ ಎಂ.ಪಿ., ಅಂಬರೀಶ ಕುಂಬಾರಿ, ಕಿರಣ ತಿಳಗಂಜಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಹಿಂದು ಜಾಗರಣಾ ವೇದಿಕೆ ಸಹ ಸಂಚಾಲಕ ನಾಗೇಶ ನಾಯ್ಕ ಹೊನ್ನೆಗದ್ದೆ, ಕುಮಾರ ನಾಯ್ಕ ಹನುಮಾನನಗರ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮೂಡಭಟ್ಕಳ, ಲೋಕೇಶ ದೇವಾಡಿಗ ಪೊಲೀಸರಿಗೆ ಸಹಕರಿಸಿದ್ದರು.