ಜಿಲ್ಲೆ

12ರಂದು ಪ್ರಧಾನಿಯಿಂದ ದಶಪಥ ಉದ್ಘಾಟನೆ

ಮದ್ದೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಮಾ.12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಜನ ಆಗಮಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು.
ತಾಲೂಕಿನ ಗೆಜ್ಜಲಗೆರೆ ಕಾಲನಿ ಬಳಿ ಶುಕ್ರವಾರ ವೇದಿಕೆ ಕಾರ್ಯಕ್ರಮದ ಸಿದ್ಧತಾ ಕಾರ್ಯ ಪರಿಶೀಲಿಸಿದ ಬಳಿಕ ಅಧಿಕಾರಿಗಳು ಹಾಗೂ ಬಿಜೆಪಿ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ ಮಾತನಾಡಿದರು.
ದಶಪಥ ಹೆದ್ದಾರಿ ಉದ್ಘಾಟನೆ ನಂತರ ಬೃಹತ್ ಸಮಾವೇಶ ನಡೆಯಲಿದೆ. ಈಗಾಗಲೇ ಬೆಳಗಾವಿ, ಹುಬ್ಬಳ್ಳಿ ನಗರಗಳಲ್ಲಿ ಬೃಹತ್ ಸಮಾವೇಶಗಳು ನಡೆದಿವೆ. ಆ ಎರಡು ಕಾರ್ಯಕ್ರಮಗಳಿಗಿಂತ ಮಂಡ್ಯದ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯಬೇಕು. ಹೀಗಾಗಿ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಪ್ರತಿ ಮನೆಯಿಂದ ಒಬ್ಬೊಬ್ಬ ಕಾರ್ಯಕರ್ತರನ್ನು ಕರೆ ತರುವ ವ್ಯವಸ್ಥೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಕಾಂಗ್ರೆಸ್ ಸಮಾವೇಶಗಳಿಗೆ 500 ರೂ. ಕೊಟ್ಟು ಕರೆ ತನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಯಾವ ಕಾಲಕ್ಕೂ ಆ ರೀತಿ ಮಾಡಿಲ್ಲ. ನಮ್ಮ ಪಕ್ಷದಲ್ಲಿ ಮೋದಿ, ಅಮಿತ್ ಷಾ ಬಂದರೆ ಕಾರ್ಯಕರ್ತರು ತಾವಾಗಿಯೇ ಬರುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದರು.
ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಜಿಲ್ಲೆಗೆ ನಮ್ಮ ಹೆಮ್ಮೆಯ ಪ್ರಧಾನಿ ಬರುತ್ತಿದ್ದಾರೆ. ಕರ್ನಾಟಕದಲ್ಲಿ ನಡೆದ ರೋಡ್ ಶೋಗಳಿಗಿಂತ ಬೆಸ್ಟ್ ಶೋ ಆಗಬೇಕು. ಇಡೀ ದೇಶವೇ ಮಂಡ್ಯವನ್ನು ತಿರುಗಿ ನೋಡುವಂತೆ ಮಾಡಲಾಗುವುದು ಎಂದರು.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮಂಡ್ಯ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿವೆ. ದಶಪಥ ಹೆದ್ದಾರಿಗೆ ಮಂಡ್ಯ ಜನರ ಬಹುದೊಡ್ಡ ಕೊಡುಗೆ ಇದೆ ಎಂದರು.
ಹೆದ್ದಾರಿಯಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಈಗಾಗಲೇ ಜಿಲ್ಲೆಗೆ ಜಲಜೀವನ್ ಮಿಷನ್ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಪಾಸ್‌ಪೋರ್ಟ್ ಸೇವಾ ಕೇಂದ್ರ ಹಾಗೂ ಮುಂದಿನ ದಿನಗಳಲ್ಲಿ ಇಂಗ್ಲೆಂಡ್ ಕಂಟೈನರ್ ಡಿಪೋ ಕೂಡ ಜಿಲ್ಲೆಗೆ ಕಾಲಿಡಲಿದೆ ಎಂದು ವಿವರಿಸಿದರು.
ಅಬಕಾರಿ ಸಚಿವ ಕೆ.ಗೋಪಾಲಯ್ಯ, ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ತಾಲೂಕು ಅಧ್ಯಕ್ಷ ಪಣ್ಣೆದೊಡ್ಡಿ ರಘು, ಮನ್ ಮುಲ್ ನಿರ್ದೇಶಕರಾದ ಎಸ್.ಪಿ.ಸ್ವಾಮಿ, ರೂಪಾ ಇದ್ದರು.