ಮೈಸೂರು: ಬಸವಾದಿಶರಣ ಕಾಲದಲ್ಲಿ ಮಹಿಳೆಯರಿಗೆ ಸಮಾನತೆ ನೀಡುವ ಮೂಲಕ ಗೌರವಿಸಲಾಗಿತ್ತು. ಆ ಪರಂಪರೆ ಇನ್ನಷ್ಟು ಮುಂದುವರಿಯಬೇಕು ಎಂದು ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ್ ಅಭಿಪ್ರಾಯಪಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಮೈಸೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಶ್ರೀವಾಸವಿ ಶಾಂತಿಧಾಮದಿಂದ ಆಲನಹಳ್ಳಿ ಬಡಾವಣೆಯಲ್ಲಿರುವ ಶ್ರೀವಾಸವಿ ಶಾಂತಿಧಾಮ ಭಾನುವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ವಚನ ಗಾಯನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅನಾದಿಕಾಲದಿಂದಲೂ ನಮ್ಮ ದೇಶದಲ್ಲಿ ಮಹಿಳೆಯರಿಗೆ ಗೌರವಯುತ ಸ್ಥಾನ ನೀಡುತ್ತಾ ಬಂದಿದ್ದಾರೆ. 12ನೇ ಶತಮಾನದಲ್ಲಿಯೂ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ ಸೇರಿದಂತೆ ಅನೇಕರಿಗೆ ಸ್ಥಾನ ನೀಡಲಾಗಿತ್ತು. ಹೀಗಾಗಿಯೇ ಅಕ್ಕಮಹಾದೇವಿ ಅವರು ಜಗತ್ತಿಗೆ ಪ್ರಥಮ ಕವಿಯತ್ರಿ ಅಗಲು ಸಾಧ್ಯವಾಯಿತು. ಅದು ಕನ್ನಡದವರು ಎನ್ನುವ ಹೆಮ್ಮೆ ನಮಗಿದೆ ಎಂದರು.
ಸಮಾಜದಲ್ಲಿ ಮಹಿಳೆಗೆ ನೀಡುವ ಗೌರವವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರದಂತಹ ಪ್ರಕರಣಗಳು ತಡೆಯಲು ಸಾಧ್ಯ. ಮಹಿಳೆಯರು ಸರ್ಕಾರದ ಯೋಜನೆ, ಕಾಯಿದೆ, ಕಾನೂನುಗಳನ್ನು ತಿಳಿದುಕೊಂಡು ಧೈರ್ಯದಿಂದ ತಮಗಾದ ಅನ್ಯಾಯವನ್ನು ಎದುರಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ, ಮಹಿಳಾ ದಿನಾಚರಣೆಯ ಹಿನ್ನೆಲೆಯ ಬಗ್ಗೆ ಮಾತನಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ದೇವರಾಜು ಪಿ.ಚಿಕ್ಕಹಳ್ಳಿ, ಶ್ರೀವಾಸವಿ ಶಾಂತಿಧಾಮದ ಕಾರ್ಯಕ್ರಮ ಸಂಘಟಕ ಸಿ.ಮೋಹನ್‌ರಾಜು ಇದ್ದರು. ಚೂಡಾಮಣಿ ಮತ್ತು ಬಾಗಳಿ ಮಹೇಶ್ ಅವರಿಂದ ವಚನ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.