ಜಿಲ್ಲೆ

ಅಮೆರಿಕಾದ ರಿಚ್ಮಂಡ್ ನಲ್ಲಿ ಆ.30 ರಿಂದ 12ನೇ ವಿಶ್ವ ಅಕ್ಕ ಸಮ್ಮೇಳನ: ರವಿ ಬೋರೇಗೌಡ ಮಾಹಿತಿ

ಮೈಸೂರು: ಅಮೆರಿಕದಲ್ಲಿರುವ ಕನ್ನಡ ಸಂಘಟನೆಗಳ ಒಕ್ಕೂಟ (ಅಕ್ಕ)ದಿಂದ ಈ ಬಾರಿ 12ನೇ ವಿಶ್ವ ಅಕ್ಕ ಸಮ್ಮೇಳನವನ್ನು ಆಗಸ್ಟ್ 30 ರಿಂದ ಸೆಪ್ಟೆಂಬರ್ ಒಂದರವರೆಗೆ ವಾಷಿಂಗ್ಟನ್ ಡಿಸಿ ಬಳಿ ಇರುವ ರಿಚ್ಮಂಡ್ ನಗರದಲ್ಲಿ ಆಯೋಜಿಸಲು ಸಿದ್ಧತೆ ನಡೆದಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ರವಿ ಬೋರೇಗೌಡ ತಿಳಿಸಿದರು.
ಅಮೆರಿಕದಲ್ಲಿನ ಕನ್ನಡಿಗರು ಒಟ್ಟುಗೂಡಿ ಕನ್ನಡ ಭಾಷೆ, ಸಂಸ್ಕೃತಿ, ಕಲೆ ಉಳಿಸಿಕೊಂಡು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಅಕ್ಕ ಬಳಗವನ್ನು ಸ್ಥಾಪಿಸಿಕೊಂಡಿದ್ದು, ನಿರಂತರವಾಗಿ ಸಮ್ಮೇಳನ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಇದು 12ನೇ ಸಮ್ಮೇಳನವಾಗಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಮೆರಿಕದಲ್ಲಿ ನಮ್ಮ ಕನ್ನಡ ಸಂಸ್ಕೃತಿ, ಪರಂಪರೆ, ಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 50ಕ್ಕೂ ಹೆಚ್ಚು ಕನ್ನಡ ಒಕ್ಕೂಟಗಳು ಕೆಲಸ ಮಾಡುತ್ತಿವೆ. ಅವುಗಳು ಸೇರಿಕೊಂಡು ಅಮೆರಿಕ ಕನ್ನಡ ಸಂಘಟನೆಗಳ ಒಕ್ಕೂಟ (ಅಕ್ಕ) ರಚಿಸಿಕೊಂಡು ಅದರ ಮೂಲಕ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ವಿಶ್ವ ಅಕ್ಕ ಸಮ್ಮೇಳನ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.
ನಾವು ದೂರದ ಪರದೇಶದಲ್ಲಿ ಇದ್ದರೂ, ನಮ್ಮ ಮಕ್ಕಳು ಕನ್ನಡದ ಸೊಗಡು ಬಿಡಬಾರದು ಎನ್ನುವ ನಿಟ್ಟಿನಲ್ಲಿ ನಿರಂತರವಾಗಿ ಕನ್ನಡ ಕಲಿಕೆ, ಕನ್ನಡ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಕನ್ನಡ ಮಾತನಾಡುವ, ಬರೆಯುವುದನ್ನು ಮಕ್ಕಳಿಗೆ ಕಲಿಸುವ ಜತೆಗೆ ಆಸಕ್ತರಿಗೂ ಕಲಿಸುವ ಕೆಲಸ ಮಾಡುವುದಲ್ಲದೇ ಪ್ರಮಾಣಪತ್ರವನ್ನು ನೀಡುವ ಕೆಲಸ ಅಗುತ್ತಿದೆ ಎಂದರು.
ಕನ್ನಡ ಬಳಗದಲ್ಲಿ ಇರುವವರೆಲ್ಲ ರಾಜ್ಯದ ಯಾವುದೋ ಒಂದು ಕಡೆ ಜನಿಸಿ, ಎಲ್ಲೋ ಬೆಳೆದು ಅಮೆರಿಕದಲ್ಲಿ ವೈದ್ಯರು, ಇಂಜಿನಿಯರ್ ಸೇರಿದಂತೆ ಬೇರೆ ಬೇರೆ ಕೆಲಸದಲ್ಲಿ ಇದ್ದಾರೆ. ಆದರೂ ಕನ್ನಡ ಭಾಷೆ, ಸಂಸ್ಕೃತಿ ಅಲ್ಲಿಯೂ ಉಳಿಸಿಕೊಂಡು ಮುಂದಿನ ಪೀಳಿಗೆಗೂ ಉಳಿಸಿಕೊಡುವ ಹಿನ್ನೆಲೆಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಒಂದೆಡೆ ಸೇರಿ ಈ ರೀತಿಯ ಸಮ್ಮೇಳನ ಆಯೋಜಿಸುವ ಮೂಲಕ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ವಿಶ್ವದಾದ್ಯಂತ ಸುಮಾರು ಐದು ಸಾವಿರ ಜನರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ರಾಜ್ಯದಲ್ಲಿರುವ ಸ್ಥಳೀಯ ಹಾಗೂ ವಿಶ್ವದ ಇತರೆಡೆಯ ಕಲಾವಿದರು, ವಿದ್ಯಾರ್ಥಿಗಳ ಸಂಘಟನೆಗಳ ಹಳೆಯ ವಿದ್ಯಾರ್ಥಿಗಳು, ವಾಣಿಜ್ಯ ಮಳಿಗೆ, ಸಾಹಿತ್ಯ, ಸಂಸ್ಕೃತಿ ಮೊದಲಾದ ಕಾರ್ಯಕ್ರಮ ಇರಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಲ್ಲದೆ, ಇತರ ಅಧಿಕಾರಿಗಳು, ಸಂಘ- ಸಂಸ್ಥೆಗಳ ಮೂಲಕವೂ ನೈಜ ಕಲಾವಿದರನ್ನು ಗುರುತಿಸಿ ಅವರನ್ನು ಸಮ್ಮೇಳನಕ್ಕೆ ಅಹ್ವಾನಿಸಲಾಗುವುದು ಎಂದು ವಿವರಿಸಿದರು.
ಅಕ್ಕ ಸಮ್ಮೇಳನಕ್ಕೆ ಈಗ ಅಮೆರಿಕದಲ್ಲಿಯೂ ಒಂದು ರೀತಿಯ ಮಾನ್ಯತೆ ದೊರೆತ್ತಿದ್ದು, ಸಮ್ಮೇಳನದ ಆಹ್ವಾನ ಪತ್ರಿಕೆ ಇದ್ದರೆ ಸುಲಭವಾಗಿ ವೀಸಾ ದೊರೆಯುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಇದು ನಮ್ಮ ಕನ್ನಡಿಗರಿಗೆ ಸಂದ ಗೌರವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಕನ್ನಡಿಗರ ಅಸ್ಮಿತೆಯಾಗಿರುವ ಅಕ್ಕ ಸಮ್ಮೇಳನ ಅಮೆರಿಕದಲ್ಲಿ ಕನ್ನಡಿಗರ ಹೆಗ್ಗುರುತಾಗಿದೆ. ಈ ಸಮ್ಮೇಳನದಲ್ಲಿ ಸರ್ಕಾರದ ಭಾಗವಾಗಿ ಮುಖ್ಯಮಂತ್ರಿಗಳು, ಸಚಿವರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಈ ಬಾರಿ ತಾವೂ ತೆರಳುತ್ತಿರುವುದಾಗಿ ತಿಳಿಸಿದರು.

ಸಮ್ಮೇಳನ ಸಮಿತಿಯ ಡಾ.ವಿಶ್ವಾಮಿತ್ರ, ಮಹದೇಶ್, ಬಸವರಾಜು, ಡಾ. ನವೀನ್‌ಕೃಷ್ಣ, ವತ್ಸ ಇದ್ದರು.

ಅಕ್ಕ ಸಮ್ಮೇಳನದಲ್ಲಿ ಸಿರಿಧಾನ್ಯ ಪ್ರದರ್ಶನ
ಈ ಬಾರಿ ಅಕ್ಕ ಸಮ್ಮೇಳನದಲ್ಲಿ ನಮ್ಮ ದೇಶದ ಸಿರಿಧಾನ್ಯ ಸಂಸ್ಕೃತಿಯನ್ನು ಪರಿಚಯಿಸಲು ಮಳಿಗೆಯೊಂದನ್ನು ತೆರೆಯಲು ಸಿದ್ಧತೆ ನಡೆದಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ರವಿ ಬೋರೇಗೌಡ ತಿಳಿಸಿದರು.
ನಮ್ಮ ಸಂಸ್ಕೃತಿ, ಕಲೆ, ಸಾಹಿತ್ಯ ಅಲ್ಲದೆ ಆಹಾರ ಪದ್ಧತಿಯನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಹಾಗಾಗಿ ರಾಜ್ಯದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿದಾಗ ಸಿರಿಧಾನ್ಯ ಮಳಿಗೆ ತೆರೆದು ಸಿರಿಧಾನ್ಯಗಳನ್ನು ಪರಿಚಯಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.