ಚಿಂಚೋಳಿ ತಾಲೂಕಿನ ದೇಗಲಮಡಿಯಲ್ಲಿ ಜಾತ್ರೋತ್ಸವ ಸಮಾರಂಭವನ್ನು ಶ್ರೀ ಬಂಡೆಮ್ಮ ತಾಯಿ ಉದ್ಘಾಟಿಸಿದರು. ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಶ್ರೀ ಡಾ.ಬಸವಲಿಂಗ ಅವಧೂತ, ಶ್ರೀ ಶಿವಲಿಂಗ ಸ್ವಾಮೀಜಿ, ಸುರೇಶ ಚನ್ನಶೆಟ್ಟಿ ಇತರರಿದ್ದರು. 
ಜಿಲ್ಲೆ

ಹೆತ್ತವರ ಋಣ ತೀರಿಸಲು ನೂರು ಜನ್ಮ ಸಾಲದು

ಚಿಂಚೋಳಿ: ಹೆತ್ತವರ ಋಣ ತೀರಿಸಲು ನೂರು ಜನ್ಮ ಸಾಲದು, ಅವರೇ ನಮ್ಮ ಪಾಲಿನ ದೇವರು ಎಂಬುದನ್ನು ಪ್ರತಿಯೊಬ್ಬರೂ ಅರಿತು ನಡೆದರೆ ಬದುಕು ಸಾರ್ಥಕ ನಿಮ್ಮದಾಗುತ್ತದೆ ಎಂದು ಹಾರಕೂಡ ಹಿರೇಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.

ದೇಗಲಮಡಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಡಾ.ಬಸವಲಿಂಗ ಅವಧೂತ ಮಹಾರಾಜರ ೧೨ನೇ ಜಾತ್ರೋತ್ಸವ ಹಾಗೂ ಮಾತೆ ಅಕ್ಕಮಹಾದೇವಿ ತೊಟ್ಟಿಲೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವನಚ ನೀಡಿದ ಅವರು, ಮಾನವ ಜನ್ಮ ಪ್ರವಿತ್ರವಾದದ್ದು, ಪ್ರತಿಯೊಬ್ಬರ ವಿಚಾರಗಳು ಉತ್ತಮವಾಗಿರಬೇಕು. ಕಲ್ಮಶವನ್ನು ಅಳಿಸಿ ಸನ್ಮಾರ್ಗದ ದಾರಿಯಲ್ಲಿ ಸಾಗಬೇಕು ಎಂದರು.

ದೇಗಲಮಡಿ ಗ್ರಾಮವನ್ನು ಪುಣ್ಯಕ್ಷೇತ್ರವನ್ನಾಗಿಸಿದ ಕೀರ್ತಿ ಶ್ರೀ ಡಾ.ಬಸವಲಿಂಗ ಅವಧೂತರಿಗೆ ಸಲ್ಲುತ್ತದೆ. ಘಟದಿಂದ ಮಠವಾಗಿ ಬೆಳೆಸುತ್ತ ಭಕ್ತರಿಗೆ ಸನ್ಮಾರ್ಗದ ದಾರಿಯನ್ನು ತೊರುತ್ತಿದ್ದಾರೆ. ನಾವು ಮಾಡಿದ ಉಪಕಾರ ಹಾಗೂ ನಮಗೆ ಮಾಡಿದ ಅಪಕಾರವನ್ನು ಮರೆತು ಜೀವಿಸಿದರೆ ಬದುಕು ಸುಂದರವಾಗುತ್ತದೆ ಎಂದು ತಿಳಿಸಿದರು.

ಡಾ.ಬಸವಲಿಂಗ ಅವಧೂತ ಮಹಾರಾಜ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಶರಣರ ವಾಣಿ, ಬುದ್ಧ, ಬಸವ, ಅಂಬೇಡ್ಕರ್ ಅವರು ವಿಚಾರಧಾರೆಗಳನ್ನು ಅರಿತು ಬಾಳಬೇಕು. ಮೂಢನಂಬಿಕೆಯಿಂದ ಹೊರ ಬಂದು ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಬಂಡೆಮ್ಮ ತಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಖೇಣಗಿಯ ಶ್ರೀ ಶಿವಲಿಂಗ ಸ್ವಾಮೀಜಿ, ಕೇಂದ್ರ ಸಚಿವ ಭಗವಂತ ಖೂಬಾ, ಕನ್ನಡ ಸಾಹಿತ್ಯ ಪರಿಷತ್ ಬೀದರ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೇಟ್ಟಿ ಇತರರಿದ್ದರು.

ಸಾರೋಟಲ್ಲಿ ಪಲ್ಲಕ್ಕಿ ಉತ್ಸವ: ದೇಗಲಮಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಹಾಗೂ ಡಾ.ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ನಡೆಯಿತು. ಅಲಂಕೃತ ಸಾರೋಟದಲ್ಲಿ ಪಲ್ಲಕ್ಕಿ ಹಾಗೂ ಶ್ರೀಗಳು ಕೂರಿಸಿ ಅದ್ದೂರಿ ಉತ್ಸವ ನಡೆಸಲಾಯಿತು. ವೀರಭದ್ರೇಶ್ವರ ದೇವಾಲಯದಿಂದ ಆಶ್ರಮದವರೆಗೂ ಉತ್ಸವ ಸಾಗಿತು. ದಾರಿಯುದ್ದಕ್ಕೂ ಮಹಿಳೆಯರ ಕೋಲಾಟ, ಭಕ್ತರ ಭಜನೆ ಹಾಗೂ ಜೈಘೋಷಗಳು ಗಮನಸೆಳೆದವು. ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕದ ಸಹಸ್ರಾರು ಭಕ್ತರು ಸಾಕ್ಷಿಯಾದರು.