?????? 
ಜಿಲ್ಲೆ

ಸಹಕಾರಿಗಳಿಗಲ್ಲ, ಸಾಹುಕಾರರಿಗೆ ಮಾತ್ರ : ಸಾರ್ವತ್ರಿಕ ಚುನಾವಣೆಯಂತೆ ನಡೆದ ಪಿಎಸಿಎಸ್​ ಚುನಾವಣೆ, ಬಿಡಿಸಿಸಿ ಬ್ಯಾಂಕ್​, ಬಮುಲ್​ ಅಧಿಕಾರಿ ಕಾರಣ

Ramanagara

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ತಾಲೂಕಿನಲ್ಲಿ ನಡೆಯುವ ಪ್ರತಿಯೊಂದು ಸಹಕಾರ ಸಂಘಗಳ ಚುನಾವಣೆಗಳೂ ಸಹಕಾರ ಚುನಾವಣೆಗಳಲ್ಲ. ಸಾಹುಕಾರ ಚುನಾವಣೆ ಎಂಬ ಮಾತುಗಳು ತಾಲೂಕಿನೆಲ್ಲೆಡೆ ಕೇಳಿ ಬರುತ್ತಿವೆ. ಇದಕ್ಕೆ ಉದಾಹರಣೆ ಸೋಮವಾರ ನಡೆದ ಮಳೂರುಪಟ್ಟಣ ಪಿಎಸಿಎಸ್​ ಚುನಾವಣೆ.

ಸಹಕಾರಂ ಗೆಲ್ಗೆ ಸಹಕಾರಂ ಬಾಳ್ಗೆ ಎಂಬ ಉದ್ದೇಶದೊಂದಿಗೆ ತಾಲೂಕಿನಲ್ಲಿ ಆರಂಭಗೊಂಡ ಪ್ರತಿ ಸಹಕಾರ ಸಂಘಗಳು ಬಡ, ಮಧ್ಯಮ ವರ್ಗದವರ ಅದರಲ್ಲೂ ರೈತಾಪಿ ಕುಟುಂಬಗಳ ಆಸರೆ ಎಂಬುದರಲ್ಲಿ ಮಾತಿಲ್ಲ. ತಾಲೂಕಿನ ಹಲವು ಸಹಕಾರಿ ಧುರೀಣರು ಸಂಘ&ಸಂಸ್ಥೆಗಳ ಅಭಿವೃದ್ಧಿಗೆ ಅಹನಿರ್ಶಿ ದುಡಿದಿದ್ದಾರೆ. ಆದರೆ, ಈ ಸಂಘಗಳ ಅಧಿಕಾರ ಚುಕ್ಕಾಣಿ ಹಿಡಿಯಲು ಆರಂಭಗೊಂಡಿರುವ ಸರ್ಕಸ್​ಗಳನ್ನು ಗಮನಿಸಿದರೆ, ಈ ಚುನಾವಣೆಗಳು ಬಡ ಸಹಕಾರಿಗಳಿಗಲ್ಲ.., ಸಾಹುಕಾರ ಸಹಕಾರಿಗಳಿಗೆ ಮಾತ್ರ ಎಂಬುದನ್ನು ನಿರೂಪಿಸುತ್ತಿವೆ.

ತಾಲೂಕಿನಲ್ಲಿ ನೂರಾರು ಹಾಲು ಉತ್ಪಾದಕರ ಸಹಕಾರ ಸಂಘಗಳು, 21 ಪಿಎಸಿಎಸ್​ (ಮೊದಲು ವಿಎಸ್ಸೆಸ್ಸೆನ್​) ಬಿಡಿಸಿಸಿ ಬ್ಯಾಂಕ್​, ಎಂಪಿಎಂಸಿ, ಟಿಎಪಿಸಿಎಂಎಸ್​ ಸೇರಿ ಹಲವು ಸಂಘ ಸಂಸ್ಥೆಗಳಿವೆ. ಇವುಗಳ ಅಧಿಕಾರ ಹಿಡಿಯಲು ಹಣದ ಹೊಳೆ ಹರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕೇವಲ ಪ್ರತಿಷ್ಠೆಗಾಗಿ ಜಿದ್ದಿಗೆ ಬಿದ್ದವರಂತೆ ಆಖಾಡಕ್ಕಿಳಿದು ಕಾದಾಡುವ ಸ್ಥಿತಿ ನಿಮಾರ್ಣವಾಗಿದೆ. ಇತ್ತೀಚೆಗೆ ಹಲವು ಸಂಘ ಸಂಸ್ಥೆಗಳಿಗೆ ನಡೆದಿರುವ ಚುನಾವಣೆಗಳು ಇದಕ್ಕೆ ಸಾಕ್ಷಿಯಾಗಿವೆ.

ಮಳೂರು ಪಟ್ಟಣ ಸಾಕ್ಷಿ: ತಾಲೂಕಿನ ಮಳೂರುಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ತಾಲೂಕಿನ ಸಹಕಾರಿ ಕ್ಷೇತ್ರದ ಚುನಾವಣೆಗಳ ರಂಗಿಗೆ ಪ್ರತ್ಯಕ್ಷ ಸಾಕ್ಷಿ. 9 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆ ಸಾರ್ವತ್ರಿಕ ಚುನಾವಣೆಯನ್ನೂ ಮೀರಿಸುವಂತಿತ್ತು. ತಮ್ಮ ಪಕ್ಷ ಬೆಂಬಲಿತ ಅಭ್ಯಥಿರ್ಗಳನ್ನು ಗೆಲ್ಲಿಸಲು, ಮತದಾರರ ಮನವೊಲಿಸಲು ಕೇವಲ ಆ ಸಂಘ ವ್ಯಾಪ್ತಿಯ ಮುಖಂಡರಷ್ಟೇ ಅಲ್ಲದೆ, ತಾಲೂಕಿನ ಹಲವು ಪಕ್ಷಗಳ ಧುರೀಣರು ಗ್ರಾಮದಲ್ಲಿ ನೆರೆದಿದ್ದರು. ಮತದಾನ ನಡೆಯುತ್ತಿದ್ದ ಇಡೀ ರಸ್ತೆ ಜನಜಂಗುಳಿಯಿಂದ ತುಂಬಿತ್ತು. ಒಂದು ಸಣ್ಣ ಪಿಎಸಿಎಸ್​ ಚುನಾವಣೆಗೆ ಓರ್ವ ಸಿಪಿಐ ನೇತೃತ್ವದಲ್ಲಿ ನಾಲ್ಕು ಪಿಎಸ್​ಐ ಸೇರಿ 40ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದು ತಾಲೂಕಿನ ಸಹಕಾರಿ ಕ್ಷೇತ್ರದ ಚುನಾವಣೆಗಳ ಕಾವಿಗೆ ಪ್ರತ್ಯಕ್ಷ ಸಾಕ್ಷಿ.

ಬಿಡಿಸಿಸಿ ಬ್ಯಾಂಕ್​ ಮತ್ತು ಬಮುಲ್: ತಾಲೂಕಿನ ಪ್ರತಿ ಪಿಎಸಿಎಸ್​ ಮತ್ತು ಎಂಪಿಸಿಎಸ್​ ಚುನಾವಣೆಗಳು ಬಹುತೇಕ ರಂಗೇರುತ್ತವೆ. ಇದಕ್ಕೆ ಪ್ರಮುಖ ಕಾರಣ ಬಿಡಿಸಿಸಿ ಬ್ಯಾಂಕ್​ ಮತ್ತು ಬಮುಲ್​ ನಿರ್ದೇಶಕ ಸ್ಥಾನ. ಈ ಹಿಂದೆ ಚುನಾವಣೆಗಳು ನಡೆಯುವ ವಿಚಾರವೇ ಗೊತ್ತಾಗುತ್ತಿರಲಿಲ್ಲ. ಆ ಭಾಗದ ಮುಖಂಡರು ಈ ಸಂಘದ ನಿರ್ದೇಶಕರು ಮತ್ತು ಅಧ್ಯಕ್ಷರು ಯಾರಾಗಬೇಕು ಎಂದು ನಿರ್ಧರಿಸಿ, ಈ ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡುತ್ತಿದ್ದರಂತೆ. ಆದರೆ, ಬಮುಲ್​ ಹಾಗೂ ಬಿಡಿಸಿಸಿ ಬ್ಯಾಂಕ್​ ನಿರ್ದೇಶಕರಾಗಲು ಈ ಸಂಘಗಳು ಪ್ರಮುಖವಾಗಿರುವ ಕಾರಣ ಈ ಚುನಾವಣೆಗಳು ಮಹತ್ವ ಪಡೆದುಕೊಂಡಿವೆ. ಬಿಡಿಸಿಸಿ ಮತ್ತು ಬಮುಲ್​ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಈ ಸಂಘಗಳ ಹಿಡಿತ ತೆಗೆದುಕೊಳ್ಳಬೇಕು ಎಂದು ಪಣ ತೊಡುವ ಕಾರಣ, ತಾಲೂಕಿನ ಬಹುತೇಕ ಸಹಕಾರ ಸಂಘಗಳ ಚುನಾವಣೆಗಳು ತೀವ್ರ ಕಾವೇರುತ್ತಿವೆ.

ತಾಲೂಕಿನ ಪ್ರತಿ ಎಂಪಿಸಿಎಸ್​ ಹಾಗೂ ಪಿಎಸಿಎಸ್​ ನಿರ್ದೇಶಕರಾಗಲು ಬೆವರ ಹನಿಯ ಜತೆಗೆ ಹಣ ಚೆಲ್ಲಬೇಕಾದ ಸನ್ನಿವೇಶ ನಿಮಾರ್ಣವಾಗಿದೆ. ಈ ಕಾರಣಕ್ಕಾಗಿ ಸಹಕಾರ ಸಂಘಗಳ ಚುನಾವಣೆಗಳು ಸಹಕಾರಿಗಳಿಗಲ್ಲ, ಕೇವಲ ಸಾಹುಕಾರರಿಗೆ ಎನ್ನುವ ಮಾತುಗಳು ವ್ಯಾಪಕವಾಗಿವೆ.