ಮಂಡ್ಯ: ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಕನ್ನಡ ನಾಡನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ, ಘನತೆ, ಗೌರವವನ್ನು ಕಾಪಾಡಿಕೊಂಡು ಹಾಗೂ ಮುಂದುವರಿಸಿಕೊಂಡು ಹೋಗುವ ಅಪ್ರತಿಮ ಕನ್ನಡದ ಕಣ್ಮಣಿ ಮತ್ತು ನಾಡಿಗೆ ಅನನ್ಯ ಸಾಹಿತ್ಯ ಕೃತಿಗಳಿಂದ ಕೊಡುಗೆ ನೀಡಿರುವ ಸಮರ್ಥ ಕನ್ನಡದ ಸೇನಾನಿಯಾಗಬೇಕು. ಅದರಂತೆ ಈ ಎಲ್ಲ ಆಶಯ ಈಡೇರಿಸಬಲ್ಲ ಸಾಹಿತಿ ಕುಂ.ವೀರಭದ್ರಪ್ಪ ಅವರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿ 127 ಜನ ಕನ್ನಡಾಭಿಮಾನಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ರಾಜ್ಯಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ಗೆ ಪತ್ರ ಬರೆದಿರುವ ಕಲಾವಿದ ಸೋಮವರ, ನಾಗಮಂಗಲ ಕೃಷ್ಣಮೂರ್ತಿ ಸೇರಿದಂತೆ 127 ಕನ್ನಡಾಭಿಮಾನಿಗಳು, ಸಮ್ಮೇಳನದ ಅಧ್ಯಕ್ಷರಾಗುವವರಿಗೆ ಕನ್ನಡ ಭಾಷೆಯ ಆಮೂಲಾಗ್ರ ಪರಿಯಚವಿರಬೇಕು. ಕನ್ನಡದಲ್ಲಿ ಅನನ್ಯವಾದ, ಮೌಲಿಕವಾದ, ಸಮೃದ್ಧವಾದ ಸಾಹಿತ್ಯ ಕೃಷಿಯನ್ನು ಮಾಡಿದವರಾಗಿರಬೇಕು. ಅವರ ಸಾಹಿತ್ಯ ಕೃತಿಗಳು ಕನ್ನಡಿಗರ, ಕನ್ನಡ ನಾಡಿನ ಗೌರವಕ್ಕೆ ಪ್ರಿತಿಗೆ ಪಾತ್ರರಾಗಿರಬೇಕು. ಸಮ್ಮೇಳನಾಧ್ಯಕ್ಷರಾಗುವವರು ಕನ್ನಡ ನಾಡಿನ ಸರ್ಕಾರಿ ಶಾಲೆಗಳಲ್ಲಿ ಓದಿದವರಾಗಿರಬೇಕು. ಅವರ ಮಕ್ಕಳು ಕೂಡ ಸರ್ಕಾರಿ ಶಾಲೆಗಳಲ್ಲಿ ಓದಿ ವಿದ್ಯಾವಂತರಾಗಿರಬೇಕು ಎಂದು ವಿವರಿಸಿದ್ದಾರೆ.
ಪ್ರಕಾಶಕರಿಂದ ಸರ್ಕಾರ ಪುಸ್ತಕಗಳನ್ನು ಕೊಳ್ಳುವಲ್ಲಿ ತೋರುತ್ತಿರುವ ವಿಳಂಬ ನೀತಿ ಹಾಗೂ ಅಸಡ್ಡೆಯನ್ನು ಖಂಡಿಸಿ ಪರಿಹಾರ ಕೊಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಡುವರಾಗಿರಬೇಕು. ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರ, ರಾಜಕೀಯ ಪಕ್ಷಗಳ ನಾಯಕರ ಯಾವುದೇ ರೀತಿಯ ಹಸ್ತಕ್ಷೇಪವಿರದಂತೆ ನೋಡಿಕೊಳ್ಳುವವರಾಗಿರಬೇಕು. ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಸರ್ಕಾರ ಎಸಗುವ ಯಾವುದೇ ರೀತಿಯ ತಪ್ಪುಗಳನ್ನು ಖಂಡಿಸಿ, ಸರ್ಕಾರಕ್ಕೆ ಬುದ್ಧಿ ಹೇಳಿ ಕೆಲಸ ಮಾಡಿಸುವ ಛಾತಿ ಹೊಂದಿದವರಾಗಿರಬೇಕು. ಪಂಪ ಹಾಗೂ ಕುವೆಂಪು ಅವರಂತೆ ಪ್ರಭುತ್ವದ ಕೆಡಕು ಹಾಗೂ ಮೌಢ್ಯಗಳನ್ನು ಪ್ರಶ್ನಿಸುವ, ತಿದ್ದುವ ಪ್ರಜ್ಞಾವಂತ ಹೋರಾಟಗಾರರಾಗಿರಬೇಕು ಎಂದು ಆಗ್ರಹಿಸಿದ್ದಾರೆ.
ಸಮಾಜದ, ಕನ್ನಡಿಗರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಸುವ ಹಾಗೂ ಯುವ ಜನಾಂಗಕ್ಕೆ ದಾರಿದೀಪವಾಗುವ ವ್ಯಕ್ತಿತ್ವವುಳ್ಳ ಅಪ್ಪಟ ಸಾಹಿತಿಯಾಗಿರಬೇಕು. ಯಾವುದೇ ಸರ್ಕಾರದ ಹಂಗಿಗೆ ಒಳಗಾಗಗೆ ಪ್ರಶಸ್ತಿ, ಬಿರುದು, ಬಾವಲಿಗಳಿಂದ ತಮ್ಮ ನಿಜದನಿಯನ್ನು ಕಳೆದುಕೊಳ್ಳದೆ, ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಕಾಪಾಡಿಕೊಂಡು, ಪ್ರಭುತ್ವದ ಅಂಕುಡೊಂಕುಗಳನ್ನು ತಿದ್ದಿ ತೀಡುವ ಶಕ್ತಿಯುತ ವ್ಯಕ್ತಿತ್ವದವರನ್ನೇ ಆಯ್ಕೆಮಾಡಬೇಕು ಎಂದು ಒತ್ತಾಯಿಸಿದ್ದಾರೆ.