ಜಿಲ್ಲೆ

ಮೈಸೂರಿನ ಕುದೇರು ಮಠದಲ್ಲಿ ಶ್ರೀ ಗುರುಮಲ್ಲೇಶ್ವರರ 126ನೇ ಪ್ರಮಥರ ಗಣಾರಾಧನೆ

ಮೈಸೂರು: ನಗರದ ಶ್ರೀ ಕುದೇರು ಮಠದಲ್ಲಿ ಮಂಗಳವಾರ ಶ್ರೀ ಗುರುಮಲ್ಲೇಶ್ವರರ 126ನೇ ಪ್ರಮಥರ ಗಣಾರಾಧನೆ ಹಾಗೂ ಲಿಂಗೈಕ್ಯ ಶ್ರೀ ಗುರುಲಿಂಗ ಸ್ವಾಮೀಜಿಯ 34ನೇ ವಾರ್ಷಿಕ ಗಣಾರಾಧನೆ ಶ್ರದ್ಧಾ, ಭಕ್ತಿಯೊಂದಿಗೆ ನೆರವೇರಿತು.

ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ಮನಸ್ಸು ಯಾವಾಗಲೂ ಮಹಾತ್ಮರನ್ನು ನೆನೆುಂಬೇಕು. ಆಗ ವಾತ್ರ ಮನಸ್ಸು ಅರಳಲು ಸಾಧ್ಯ. ಮನಸ್ಸಿಗೆ ಎರಡು ಮುಖಗಳಿವೆ. ಗುರು, ಸಂತರ ವಿಚಾರಗಳ ಬಗ್ಗೆ ತಿಳಿಯಲು ಮುಂದಾದಲ್ಲಿ ಮನಸ್ಸು ಅರಳುತ್ತದೆ. ಕೆಟ್ಟ ವಿಚಾರಗಳ ಬಗ್ಗೆ ತಿಳಿಯಲು ಹೊರಟಲ್ಲಿ ಮನಸ್ಸು ಕೆರಳುತ್ತದೆ. ಹೀಗಾಗಿ ದಾರ್ಶನಿಕರು, ಸಿದ್ಧರು, ಯೋಗಿಗಳ ಮಾತುಗಳನ್ನು ಆಲಿಸುವ ಮೂಲಕ ಮನಸ್ಸು ಅರಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಭಾರತ ಹಲವು ವಿಚಾರಗಳಲ್ಲಿ ವಿಶ್ವಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಅದರಲ್ಲಿ ಆಧ್ಯಾತ್ಮ ಸಹ ಒಂದು. ಭಾರತದ ಆತ್ಮವೆಂದರೆ ಅದು ಆಧ್ಯಾತ್ಮ. ಇಲ್ಲಿ ಜನಿಸಿರುವ ಸಂತರು, ಶರಣರು, ಯೋಗಿಗಳು, ವಚನಕಾರರು ಭಾರತವನ್ನು ಪವಿತ್ರಗೊಳಿಸಿದ್ದಾರೆ. ಭಾರತದ ಹಿರಿಯ ಮಗಳು ಕರ್ನಾಟಕ. ಇಲ್ಲಿ ಬಸವಣ್ಣ, ಗುರುಮಲ್ಲೇಶ್ವರರು ಸೇರಿದಂತೆ ಸಾಕಷ್ಟು ದಾರ್ಶನಿಕರು ಜನಿಸಿ ನಮ್ಮ ಕನ್ನಡದ ನೆಲವನ್ನು ಪವಿತ್ರಗೊಳಿಸಿದ್ದಾರೆ. ಬಸವಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ಶ್ರೀ ಗುರುಮಲ್ಲೇಶ್ವರರು ಸಾಗಿದರು. ಬಸವಣ್ಣ ಅವರ ಆಶಯಗಳನ್ನು ಗುರುಮಲ್ಲೇಶ್ವರರು ಆಚರಣೆಗೆ ಎಂದು ಹೇಳಿದರು.

ಮಠದಲ್ಲಿ ಬೆಳಗ್ಗೆ 4 ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಯಿತು. ಶ್ರೀ ಗುರುಮಲ್ಲೇಶ್ವರರು ಹಾಗೂ ಶ್ರೀ ಗುರುಲಿಂಗ ಸ್ವಾಮೀಜಿ ಅವರ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಮಧ್ಯಾಹ್ನ ಅನ್ನ ದಾಸೋಹ ನೆರವೇರಿತು.

ಶ್ರೀ ಕುದೇರು ಮಠದ ಶ್ರೀ ಗುರುಶಾಂತ ಮಹಾಸ್ವಾಮಿ ಮಾತನಾಡಿ, ಶ್ರೀ ಕುದೇರು ಮಠ ಭಕ್ತರ ಮಠ. ಭಕ್ತರೇ ನಮಗೆ ಆಸ್ತಿ. ಭಕ್ತರು ನೀಡುವ ದಾನದಿಂದಲೇ ಮಠ ಮುನ್ನಡೆಯುತ್ತಿದೆ. ಭಕ್ತರು ನಮಗೆ ನೀಡುವುದು ದಿನಸಿ ಧಾನ್ಯ. ಮಠದಲ್ಲಿ ಅದನ್ನು ನಾವು ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡುತ್ತೇವೆ ಎಂದು ಹೇಳಿದರು.

ವೇದಿಕೆಯಲ್ಲಿ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಸಿದ್ದಮಲ್ಲ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಇಮ್ಮಡಿ ಬಸಪ್ಪ ಸ್ವಾಮೀಜಿ ಹಾಗೂ ಇತರರು ಇದ್ದರು.