ತುಮಕೂರು : ಸಾರ್ವಜನಿಕರಿಗೆ ಸರ್ಕಾರಿ ಸೇವೆ ತ್ವರಿತವಾಗಿ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆ ಸಾಕಾರದಲ್ಲಿ ತುಮಕೂರು ಜಿಲ್ಲೆ 2ನೇ ಸ್ಥಾನ ಪಡೆದಿದೆ.
ರಾಜ್ಯದಲ್ಲಿ ಸಕಾಲ ಸೇವೆ ಜಾರಿಗೆ ಬಂದು 2022ರ ಏಪ್ರಿಲ್ 2ಕ್ಕೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಜರುಗಿದ ದಶಮಾನೋತ್ಸವದಲ್ಲಿ ಸಕಾಲ ಸಚಿವ ಬಿ.ಸಿ.ನಾಗೇಶ್ ಅವರಿಂದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಪ್ರಶಸ್ತಿ ಹಾಗೂ ಪ್ರಶಂಸನಾ ಪ್ರಮಾಣ ಪತ್ರ ಪಡೆದರು.
155378 ಅರ್ಜಿ ವಿಲೇವಾರಿ: ಕಳೆದ 10 ವರ್ಷದಲ್ಲಿ ರಾಜ್ಯದ ನಾಗರಿಕರು ಸೇವೆ ಕೋರಿ ಸಲ್ಲಿಸಿರುವ ಅರ್ಜಿಗಳಲ್ಲಿ ಶೇ.95.07 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಯ ಸೇವೆಗಾಗಿ ಸಕಾಲ ಯೋಜನೆಯಡಿ 2022ರ ಮಾರ್ಚ್‌ನಲ್ಲಿ 148639 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 155378 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ವಿವಿಧ ಇಲಾಖೆಗಳ 1115 ಸೇವೆ: ಸಕಾಲ ಯೋಜನೆಯಡಿ ಕಂದಾಯ ಇಲಾಖೆಯ 53 ಸೇವೆ ಸೇರಿ 1115 ಸೇವೆಗಳನ್ನು ಒದಗಿಸಲಾಗುತ್ತಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಸತಿ ದೃಢೀಕರಣ ಪತ್ರ, ಜನನ ಮತ್ತು ಮರಣ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣಪತ್ರ, ಜೀವಂತ ಪ್ರಮಾಣ ಪತ್ರ ಮತ್ತಿತರರ ಸೇವೆಯನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ. ಯೋಜನೆ ಆರಂಭವಾದ ಕಾಲದಲ್ಲಿ 281 ಸೇವೆಗಳನ್ನು ಒದಗಿಸಲಾಗುತ್ತಿತ್ತು.
ಇದೀಗ ಸಕಾಲ 2.0 : ‘ಇಂದು.. ನಾಳೆ... ಇನ್ನಿಲ್ಲ. ಹೇಳಿದ ಸಮಯ ತಪ್ಪೊಲ್ಲ’ ಎನ್ನುವ ಧ್ಯೇಯದೊಂದಿಗೆ ಇದೀಗ ಸಕಾಲ 2.0 ಅಡಿ ಹೊಸದಾಗಿ ಮೊಬೈಲ್ ಸಂದೇಶ, ಡಿಬಿಟಿ(ಈಜ್ಟಿಛ್ಚಿಠಿ ಆಛ್ಞಿಛ್ಛಿಜಿಠಿ ಖ್ಟಚ್ಞಠ್ಛಛಿಠಿ), ಸಕಾಲ ಮಿತ್ರ, ಸಕಾಲ ಸಿಟಿಜನ್ ಹ್ಯಾಪಿನೆಸ್ ಇಂಡೆಕ್ಸ್, ಸಕಾಲ ಇಂಟರ್ನ್‌ಶಿಪ್, ಹೆಸರು ಹೊಂದಾಣಿಕೆ ತಂತ್ರಜ್ಞಾನ ಕಾರ್ಯಕ್ರಮ ಪರಿಚಯಿಸಲಾಗಿದೆ.
ಸಕಾಲ ಅನುಷ್ಠಾನದಲ್ಲಿ ಜಿಲ್ಲೆಗೆ 2ನೇ ಸ್ಥಾನ ಲಭಿಸಿರುವುದಕ್ಕೆ ಖುಷಿಯಾಗಿದೆ, ಸಕಾಲದಡಿ ನಿಗದಿತ ಕಾಲಮಿತಿಯಲ್ಲಿ ಸೇವೆ ವಿಲೇವಾರಿ ಖಚಿತಪಡಿಸಿಕೊಳ್ಳುವ ಸಲುವಾಗಿ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ