ಚನ್ನರಾಯಪಟ್ಟಣದ ಮೇಗಲಕೇರಿ ಶ್ರೀ ಕಾಡ ಆಂಜನೇಯ ದೇಗುಲದಲ್ಲಿ ವಿಜಯದಶಮಿ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 125 ಮುತ್ತೈದೆಯರಿಗೆ ಶ್ರೀಗಳು ಬಾಗಿನ ಅರ್ಪಿಸಿದರು. ಅಣತಿ ಆನಂದ್, ಪ್ರಭಾಕರ್, ಚಲ್ಯ ನಾಗರಾಜ್, ಜಯರಾಂ ಇದ್ದರು. 
ಜಿಲ್ಲೆ

125 ಮುತ್ತೈದೆಯರಿಗೆ ಬಾಗಿನ ಅರ್ಪಣೆ

ಚನ್ನರಾಯಪಟ್ಟಣ: ಹಿಂದು ಸಂಪ್ರದಾಯದಲ್ಲಿ ಬಾಗಿನ ಎಂದರೆ ಹೆಣ್ಣು ಮಕ್ಕಳಿಗೆ ಅದು ಬಂಗಾರದ ಒಡವೆಯಷ್ಟೇ ಸಮ ಎಂದು ನೊಣನಕೆರೆ ಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಮೇಗಲಕೇರಿ ಶ್ರೀ ಕಾಡ ಆಂಜನೇಯಸ್ವಾಮಿ ದೇಗುಲದಲ್ಲಿ ವಿಜಯದಶಮಿ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ 125 ಮುತ್ತೈದೆಯರಿಗೆ ಬಾಗಿನ ಅರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಾಗಿನ ಸಂಬಂದಗಳ ಬೆಸುಗೆಯ ಸಂಕೇತ ಎಂದರು.

ಮದುವೆಯ ಸಂಕೋಲೆಯೊಂದಿಗೆ ಮತ್ತೊಂದು ಮನೆಯ ದೀಪವನ್ನು ಬೆಳಗಲೆಂದು ತೆರಳುವ ಹೆಣ್ಣು ಮಕ್ಕಳಿಗೆ ತವರಿನಿಂದ ಬರುವ ಬಾಗಿನ ಎಂದರೆ ಸ್ವರ್ಗವೇ ಕೈಗೆ ಸಿಕ್ಕಿದಷ್ಟೇ ಸಂತಸ ಉಂಟಾಗಲಿದೆ. ಇಂತಹದೊಂದು ಮಹಾ ಕಾರ್ಯವನ್ನು ನಡೆಸಿಕೊಡುತ್ತಿರುವ ಅಣತಿ ಆನಂದ್ ಅವರ ಬದುಕು ಬಂಗಾರವಾಗಲಿ ಎಂದು ಆಶೀರ್ವದಿಸಿದರು.

ವರ್ಷದಲ್ಲಿ ಒಮ್ಮೆ ಗೌರಿ ಹಬ್ಬದ ವೇಳೆ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದು ನಮ್ಮ ಸಂಪ್ರದಾಯ. ಅದರಂತೆಯೇ ಅಣ್ಣ-ತಮ್ಮಂದಿರು ಅದೆಷ್ಟೇ ಕಷ್ಟಗಳಿದ್ದರು ಸಹ ಅಕ್ಕ-ತಂಗಿಯರಿಗೆ ತಪ್ಪದೆ ಬಾಗಿನ ನೀಡುವುದು ಒಳಿತು. ಇದರಿಂದ ಬಾಂಧವ್ಯ ಗಟ್ಟಿಯಾಗುವುದರ ಜತೆಗೆ ಗಂಡು ಮಕ್ಕಳಿಗೆ ಶ್ರೇಯಸ್ಸು ಲಭಿಸಲಿದೆ ಎಂದು ತಿಳಿಸಿದರು.

125 ಮುತ್ತೈದೆಯರಿಗೆ ಬಾಗಿನ ನೀಡಿ ಗೌರವಿಸಲಾಯಿತು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಣತಿ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಸಮಾಜದ ಮುಖಂಡ ಪ್ರಭಾಕರ್, ಪ್ರಮುಖರಾದ ಚಲ್ಯ ನಾಗರಾಜ್, ಎ.ಎಂ.ಜಯರಾಂ ಹಾಗೂ ಇತರರು ಇದ್ದರು.