ಜಿಲ್ಲೆ

125 ತಾಯಿ, ಮಕ್ಕಳ ಆಸ್ಪತ್ರೆ ಸ್ಥಾಪನೆ

ಬೀದರ್: ಬರುವ ಐದು ವರ್ಷಗಳಲ್ಲಿ ರಾಜ್ಯಾದ್ಯಂತ 125 ಸುಸಜ್ಜಿತ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಇಲ್ಲಿಯ ಓಲ್ಡ್ ಸಿಟಿಯಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧವಾಗಿದೆ. ತಾಯಿ ಮತ್ತು ಮಕ್ಕಳಿಗೆ ಉತ್ತಮ ಚಿಕಿತ್ಸೆ ಕೊಡುವ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ 125 ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಗರ್ಭಿಣಿಯರ, ಬಾಣಂತಿಯರ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ತಪ್ಪಿಸುವುದು ಹಾಗೂ ಇವರಿಗೆ ಸೂಕ್ತ ಚಿಕಿತ್ಸೆ ನೀಡುವ ಕೆಲಸ ಈ ಆಸ್ಪತ್ರೆ ಮಾಡಲಿದೆ ಎಂದರು.

2018ರ ನೀತಿ ಆಯೋಗದ ಶ್ರೇಯಾಂಕದ ಪ್ರಕಾರ ಕೇರಳ, ತಮಿಳುನಾಡು ಬಿಟ್ಟರೆ ಕರ್ನಾಟಕವೇ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿರುವ ರಾಜ್ಯವಾಗಿದೆ. ದೇಶದ ಆರೋಗ್ಯ ಕ್ಷೇತ್ರದ ಸರಾಸರಿ ಅಂಕಕ್ಕಿಂತ ರಾಜ್ಯದ ಸರಾಸರಿ ಅಂಕ ಹೆಚ್ಚಿದೆ. ಇದನ್ನು ಇನ್ನೂ ಜಾಸ್ತಿ ಸುಧಾರಣೆ ಮಾಡುವ ಪ್ರಯತ್ನ ನಡೆದಿವೆ ಎಂದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿದರು. ಡಿಸಿಎಂ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ, ಶಾಸಕ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಬಿಡಿಎ ಅಧ್ಯಕ್ಷ ಬಾಬು ವಾಲಿ, ಜಿಪಂ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ, ಪ್ರಮುಖರಾದ ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ್ ಠಾಕೂರ್, ಆರೋಗ್ಯ ಇಲಾಖೆ ಆಯುಕ್ತ ಪಂಕಜಕುಮಾರ್ ಪಾಂಡೆ, ಅಪರ ಡಿಸಿ ರುದ್ರೇಶ ಘಾಳಿ, ಎಸಿ ಗರೀಮಾ ಪನ್ವಾರ್, ಡಿಎಚ್ಒ ಡಾ.ವಿ.ಜಿ. ರೆಡ್ಡಿ ಇತರರಿದ್ದರು. ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಸ್ವಾಗತಿಸಿದರು. ಚನ್ನಬಸವ ಹೇಡೆ, ಟಿ.ಎಂ.ಮಚ್ಚೆ ನಿರೂಪಣೆ ಮಾಡಿದರು.

ಶೀಘ್ರ 2500 ವೈದ್ಯರ ನೇಮಕ
ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯು ಶೀಘ್ರವೇ 2500 ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತಿದೆ. ಬರುವ 15 ದಿನಗಳೊಳಗೆ ಈ ಪ್ರಕ್ರಿಯೆ ಮುಗಿಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ಮುಗಿಯಲಿದೆ. ಈ ಹುದ್ದೆಗಳ ಭರ್ತಿ ನಂತರ ವೈದ್ಯರ ಕೊರತೆ ನೀಗಲಿದೆ ಎಂದರು. ತಾಯಿ, ಗರ್ಭಿಣಿಯರು ಹಾಗೂ ಮಕ್ಕಳ ಅಪೌಷ್ಠಿಕತೆ ಹೋಗಲಾಡಿಲು ಪೌಷ್ಠಿಕ ಆಹಾರ ನೀಡಲಾಗುತ್ತಿದೆ. 5 ಸಾವಿರ ಹೆರಿಗೆ ಭತ್ಯೆ ಕೊಡಲಾಗುತ್ತಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆವರೆಗೆ ಆರೋಗ್ಯ ಸೇವೆಗಳನ್ನು ಕೊಡಲು ವಿಜನ್ ಕರ್ನಾಟಕ ವಿಜನ್ ಹೆಲ್ತ್ ಯೋಜನೆ ತರಲಾಗಿದೆ. ಕೋವಿಡ್ ಸಂದರ್ಭದಲ್ಲಿ ವೈದ್ಯರಿಗೆ, ಆರೋಗ್ಯ ಸಿಬ್ಬಂದಿಗೆ 125 ಕೋಟಿ ರೂ. ವಿಶೇಷ ಭತ್ಯೆ ಈ ವರ್ಷ ಮಂಜೂರು ಮಾಡಲಾಗಿದೆ ಎಂದರು. ಅನ್ನ, ಅಕ್ಷರ, ಆಶ್ರಯ ಜತೆಯಲ್ಲಿ ಸಿಎಂ ಯಡಿಯೂರಪ್ಪ ಅವರು ರಾಜ್ಯದಲ್ಲಿ ಆರೋಗ್ಯ ದಾಸೋಹ ಕೊಡುತ್ತ ಚತುರ್ಭುಜ ದಾಸೋಹ ಕಲ್ಪಿಸುತ್ತಿದ್ದಾರೆ. ಕರೊನಾ ನಿಯಂತ್ರಣಕ್ಕೆ ಬೀದರ್ ಆಸ್ಪತ್ರೆ ಸಂಜೀವಿನಿಯಾಗಿ ಕೆಲಸ ಮಾಡಿದೆ. ಅತ್ಯಂತ ಕಡಿಮೆ ಕೋವಿಡ್ ಪ್ರಕರಣ ಇಲ್ಲಿ ಬಂದಿದ್ದು, ರಾಜ್ಯದಲ್ಲಿ ಬೀದರ್ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

12 ವರ್ಷ ಬಳಿಕ ಉದ್ಘಾಟನೆ
2008ರಲ್ಲಿ ಸಿಎಂ ಇದ್ದ ಯಡಿಯೂರಪ್ಪ ಅವರು 20 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇಂದು ಅವರೇ ಉದ್ಘಾಟಿಸಿರುವುದು ಸಂತಸ ತಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಈ ಆಸ್ಪತ್ರೆಯಿಂದ 1 ಲಕ್ಷ ಮಹಿಳೆಯರಿಗೆ ಉಪಯೋಗವಾಗಲಿದೆ. ಬಡವರಿಗೆ ಖಾಸಗಿ ಆಸ್ಪತ್ರೆಗಳು ಹೆರಿಗೆಗೆ ತುಟ್ಟಿಯಾಗುತ್ತಿವೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ. ಅನೇಕ ಪರಿಣಿತರು ಹೊಂದಿದ ಆಸ್ಪತ್ರೆಯನ್ನು ಗರ್ಭಿಣಿ, ಹೆರಿಗೆ, ಮಕ್ಕಳ ಆರೋಗ್ಯ ಚಿಕಿತ್ಸೆಗೆ ಪೂರಕವಾಗಿ ಸ್ಥಾಪಿಸಲಾಗಿದೆ. ದಿನದ 24 ಗಂಟೆ ಸೇವೆ ಸಿಗಲಿದೆ. ಒಳ, ಹೊರ ರೋಗಿ ತಪಾಸಣೆ, ಶಸ್ತ್ರ ಚಿಕಿತ್ಸೆ ಸೇರಿ ಹಲವು ಸೌಲಭ್ಯಗಳು ಇಲ್ಲಿವೆ ಎಂದರು. ಶಸ್ತ್ರ ಚಿಕಿತ್ಸೆ (ಸಿಸೇರಿಯನ್) ಹೆರಿಗೆ ವ್ಯವಸ್ಥೆ ಕಮ್ಮಿಯಾಗಿ ನೈಸರ್ಗಿಕವಾಗಿ ನಡೆಯಬೇಕು. ಹೆಚ್ಚು ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುವಂತೆ ಜನರಲ್ಲಿ ನಂಬಿಕೆ ಮೂಡಿಸುವ ಕೆಲಸ ಮಾಡಬೇಕು. ಸಿಸೇರಿಯನ್ ರಹಿತದ ಹೆರಿಗೆಗೆ ವೈದ್ಯರು ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ವಿವಿಧ ಕಾಮಗಾರಿಗೆ ಚಾಲನೆ
ಈ ವೇಳೆ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನೂ ಸಿಎಂ ಯಡಿಯೂರಪ್ಪ ನೆರವೇರಿಸಿದರು. 5.22 ಕೋಟಿ ರೂ.ವೆಚ್ಚದ ಬೀದರ್ ಇಂಜಿನಿಯರಿಂಗ್ ಕಾಲೇಜು ವಸತಿ ನಿಲಯ, 4.90 ಕೋಟಿ ರೂ. ವೆಚ್ಚದ ಸರ್ಕಾರಿ ಶೂಶ್ರುಷಕರ(ನರ್ಸಿಂಗ್) ಶಾಲೆ, ಕಾಲೇಜು ಕಟ್ಟಡ ಹಾಗೂ ವಿದ್ಯಾರ್ಥಿಗಳ ವಸತಿನಿಲಯ 2.50 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಸಂತೆಗಳ ಅಭಿವೃದ್ಧಿ (ಮನ್ನಳ್ಳಿ, ಕಮಠಾಣ ಹಾಗೂ ಬೆನಕನಳ್ಳಿ) ಕಾಮಗಾರಿ ಲೋಕಾರ್ಪಣೆ ಹಾಗೂ ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಹೊರವಲಯದ ಜಮೀಸ್ತಾನಪುರ ಉಪ ಪ್ರಾಂಗಣದಲ್ಲಿ ಹಮಾಲರಿಗೆ ಮನೆ ನಿರ್ಮಾಣಕ್ಕಾಗಿ ನಿವೇಶನದ ಹಕ್ಕುಪತ್ರಗಳನ್ನು ವಿತರಿಸಿದರು.

ಕರೊನಾ, ಪ್ರವಾಹ, ಅತಿವೃಷ್ಟಿಯಿಂದಾಗಿ ಹಣಕಾಸಿನ ಸಮಸ್ಯೆ ಎದುರಾಗಿ ಈ ವರ್ಷ ಅಭಿವೃದ್ಧಿ ಕೆಲಸಗಳು ನಿರೀಕ್ಷೆಯಂತೆ ಗುರಿ ಮುಟ್ಟಿಲ್ಲ. ಮುಂದಿನ ದಿನಗಳಲ್ಲಿ ಸಮಗ್ರ ವಿಕಾಸದ ಕಾರ್ಯಕ್ರಮ ಹಾಕಿಕೊಂಡು ಕರ್ನಾಟಕವನ್ನು ರಾಷ್ಟ್ರದಲ್ಲೇ ಮಾದರಿ ರಾಜ್ಯವಾಗಿ ರೂಪಿಸಲಾಗುವುದು.| ಯಡಿಯೂರಪ್ಪ, ಮುಖ್ಯಮಂತಿ