ತುಮಕೂರು: ಪೊಲೀಸ್ ಸಿಬ್ಬಂದಿಯ ಬಹುದಿನ ಕನಸು ನನಸಾಗಿದೆ. ತುಮಕೂರು ಜಿಲ್ಲೆಯ 124 ಸಿಬ್ಬಂದಿಗೆ ಮುಂಬಡ್ತಿ ನೀಡಲಾಗಿದ್ದು ಪೊಲೀಸ್ ವಲಯದಲ್ಲಿ ಸಂಚಲನವಾಗಿದೆ.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಮವಾರ ಮುಂಬಡ್ತಿ ಹೊಂದಿದ ಪೊಲೀಸ್ ಸಿಬ್ಬಂದಿಗೆ ಪದವಿ ಸಮಾರಂಭದಲ್ಲಿ ಜಿಲ್ಲೆಯ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಪದವಿ ನೀಡಿ, ಬೆನ್ನುತಟ್ಟಿದರು. ಎಲ್ಲ ಸಿಬ್ಬಂದಿಗೂ ಸಕಾಲದಲ್ಲಿ ಬಡ್ತಿ ನೀಡಬೇಕು ಎಂದು ಸರ್ಕಾರ 2016ರಲ್ಲಿ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಅರ್ಹ 124 ಜನರನ್ನು ಗುರುತಿಸಿ, ಬಡ್ತಿ ನೀಡಿದೆ.
ಬಡ್ತಿ ಪಡೆದಿರುವ ತುಮಕೂರಿನ 124 ಅರಕ್ಷಕ ಸಿಬ್ಬಂದಿ ಪುಳಕಿತರಾಗಿದ್ದು, ಪೇದೆಗಳು ಕೈತೋಳಿನ ಮೇಲೆ ಪಟ್ಟಿ, ಮುಖ್ಯಪೇದೆಗಳಿಗೆ ಭುಜದ ಮೇಲೆ ಸಿಂಗಲ್ ಸ್ಟಾರ್ ಬರಲಿದೆ ಎಂಬ ಖುಷಿಯಲ್ಲಿದ್ದರು. ಜಿಲ್ಲೆಯಲ್ಲಿ ಸಿಎಚ್‌ಸಿಯಿಂದ ಎಎಸ್‌ಐ ಆಗಿ 43, ಎಎಚ್‌ಸಿಯಿಂದ ಎಆರ್‌ಎಸ್‌ಐ ಆಗಿ 4, ಸಿಪಿಸಿ ಯಿಂದ ಸಿಎಚ್‌ಸಿ 68 ಹಾಗೂ ಎಪಿಸಿ ಯಿಂದ ಎಎಚ್‌ಸಿಗೆ 43 ಸಿಬ್ಬಂದಿ ಬಡ್ತಿ ಪಡೆದರು. ಬಡ್ತಿಗೆ ಅರ್ಹರಾಗಿರುವವರ ಸಂಖ್ಯೆ ಜಾಸ್ತಿಇರುವ ಹಿನ್ನೆಲೆಯಲ್ಲಿ ಸೇವಾಹಿರಿತನ ಪರಿಗಣಿಸಲಾಗಿದೆ. ಪೇದೆಯಾಗಿ ಹತ್ತು ಹಾಗೂ ಮುಖ್ಯಪೇದೆಯಾಗಿ ಐದು ವರ್ಷ ಪೂರೈಸಿದವರಿಗೆ ಬಡ್ತಿ ನೀಡಲಾಗಿದೆ. ಈ ಹಿಂದೆಯೂ ಕಾರ್ತಿಕ್‌ರೆಡ್ಡಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಸಂದರ್ಭದಲ್ಲಿ 2016ರಲ್ಲಿ ಸರ್ಕಾರದ ಸೂಚನೆಯಂತೆ ಮೊದಲ ಭಾರಿಗೆ ಸಾಮೂಹಿಕ ಬಡ್ತಿ ನೀಡಿ ಸಿಬ್ಬಂದಿಯನ್ನು ಪ್ರೋತ್ಸಾಹಿಸಲಾಗಿತ್ತು.
ತುಮಕೂರು ಉಪವಿಭಾಗದ ಡಿಎಸ್‌ಪಿ ತಿಪ್ಪೇಸ್ವಾಮಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಡಿಎಸ್‌ಪಿ ಮಂಜುನಾಥ್ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.
ಜಿಲ್ಲೆಯಲ್ಲಿ ಅರ್ಹ 214 ಸಿಬ್ಬಂದಿಗೆ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ನೀಡಲಾಗಿದೆ. ಮತ್ತಷ್ಟು ಸಿಬ್ಬಂದಿ ಉತ್ಸಾಹದಿಂದ ಕೆಲಸ ಮಾಡಲು ಅವಕಾಶವಾಗಿದೆ. ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ಅಧೀಕ್ಷಕ