ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ವಿನಯ ನಾವಲಗಟ್ಟಿ, ಎಂ.ಜೆ.ಪ್ರದೀಪ, ಮಂಜುನಾಥ ಕಾಂಬಳೆ, ಭಾರತಿ ಘೋರ್ಪಡೆ, ರೋಹಿಣಿ ಬಾಬಶೇಟ್ ಇತರರಿದ್ದರು. 
ಜಿಲ್ಲೆ

ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

Belagavi

ಬೆಳಗಾವಿ: ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಸಾರ್ವಭೌಮತ್ವಕ್ಕೆ ವಿರುದ್ಧವಾಗಿ ಉನ್ನತ ಸ್ಥಾನದಲ್ಲಿರುವ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ತೀವ್ರ ಖಂಡನೀಯ. ಆಡಳಿತ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಮತ್ತು ಜನರ ದಾರಿ ತಪ್ಪಿಸುವುದಕ್ಕಾಗಿ ಸಚಿವರು ಸಂವಿಧಾನ ವಿರೋಧಿಯಾಗಿ ಮಾತನಾಡುತ್ತಿದ್ದಾರೆ. ಅಲ್ಲದೆ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವ ವಿಚಾರ ಮತ್ತು ರಾಷ್ಟ್ರ ಧ್ವಜಕ್ಕೆ ಅಪಮಾನವನ್ನು ಕಾಂಗ್ರೆಸ್ ಯಾವತ್ತೂ ಸಹಿಸುವುದಿಲ್ಲ. ಇಂತಹ ಘಟನೆಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ.ರಾಜ್ಯಪಾಲರು ಮಧ್ಯಪ್ರವೇಶಿಸಿ ಸಚಿವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಕಠಿಣ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಎಂ.ಜೆ.ಪ್ರದೀಪ, ಮಂಜುನಾಥ ಕಾಂಬಳೆ, ಭಾರತಿ ಘೋರ್ಪಡೆ, ರೋಹಿಣಿ ಬಾಬಶೇಟ್, ಭಾರತಿ ದವಡೆ, ಆಯಿಷಾ ಸನದಿ, ರಸೂಲ್ ಮುಲ್ಲಾ ಇತರರಿದ್ದರು.