ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಹೆಚ್ಚಿನ ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಸೋಂಕು ನಾಗಲೋಟದತ್ತ ಸಾಗಿದೆ, ನಾಲ್ಕೇ ದಿನದಲ್ಲಿ 1,266 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ 123 ಮಕ್ಕಳಿಗೂ ಸೋಂಕು ದೃಢಪಟ್ಟಿರುವುದು ಭೀತಿಗೆ ಕಾರಣವಾಗಿದೆ.
ಕರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ತಜ್ಞರ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಪಾಲಕರು ಕಳವಳಗೊಂಡಿದ್ದು, ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಬಹುತೇಕ ಪಾಲಕರು ಅನ್‌ಲೈನ್ ತರಗತಿ ನಡೆಸುವಂತೆ ಶಿಕ್ಷಕರಿಗೆ ದುಂಬಾಲು ಬಿದ್ದಿದ್ದಾರೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತಿದ್ದು, ಜಿಲ್ಲಾಡಳಿತದ ಆದೇಶಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಎದುರು ನೋಡುತ್ತಿದೆ.
ವಾರದಿಂದೀಚೆಗೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಇದ್ದಕ್ಕಿದ್ದಂತೆ ಮಕ್ಕಳ ಗೈರು ಹೆಚ್ಚಾಗುತ್ತಿದೆ, ಲಸಿಕೆ ಹಾಕುವ ಅಭಿಯಾನ ಚುರುಕುಗೊಂಡಿದ್ದರೂ ಮಕ್ಕಳನ್ನು ಹುಡುಕುವುದೇ ಕಷ್ಟ ಎನ್ನುವಂತಾಗಿದೆ. ಇದರ ನಡುವೆ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ವ್ಯಾಕ್ಸಿನ್ ಹಾಕಲು ಆರೋಗ್ಯ ಇಲಾಖೆ ಬೆವರು ಸುರಿಸುತ್ತಿದೆ.
ಜಿಲ್ಲೆಯಲ್ಲಿ 123 ಮಕ್ಕಳಿಗೆ ಕರೊನಾ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. 1ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸೋಂಕಿತ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗಳಿಗೆ ತಾತ್ಕಾಲಿಕ ರಜೆ ನೀಡಲಾಗಿದೆ.
ಸೋಂಕಿತರನ್ನು ಐಸೋಲೇಷನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ದೊಡ್ಡಬಳ್ಳಾಪುರ ತಾಲೂಕಿನ ದೇವಲ ಮಹರ್ಷಿ ಶಾಲೆಯ 25 ಮಕ್ಕಳು ಮತ್ತು ಕೊಂಗಾಡಿಯಪ್ಪ ಪ್ರಾಥಮಿಕ ಶಾಲೆಯ 18 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಕರೊನಾ ಪ್ರಕರಣ ದಾಖಲಾಗಿರುವುದು ಈ ಎರಡು ಶಾಲೆಗಳಲ್ಲೇ ಎನ್ನಲಾಗಿದೆ, ಉಳಿದಂತೆ, ಒಂದೆರಡು ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿನ ಉಳಿದ ಶಾಲೆಗಳಲ್ಲಿ ಕಂಡು ಬಂದಿದೆ.
42 ಶಿಕ್ಷಕರಿಗೆ ಪಾಸಿಟಿವ್: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಲ್ಲಿ 42 ಮಂದಿಗೆ ಸೋಂಕು ತಗುಲಿದೆ. ಶಾಲಾ ಮಕ್ಕಳಿಗೆ ಸೋಂಕು ತಗಲಿದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ರ‌್ಯಾಂಡಮ್ ಪರೀಕ್ಷೆ ನಡೆಸುತ್ತಿದ್ದು, ಈ ವೇಳೆ ವಿವಿಧ ಶಾಲೆಗಳಲ್ಲಿನ ಶಿಕ್ಷಕರಿಗೂ ಸೋಂಕು ತಗಲಿರುವುದು ದೃಢಪಟ್ಟಿದೆ.
ಕರೊನಾ ಮಾರ್ಗಸೂಚಿ ಕಡೆಗಣಿಸುತ್ತಿರುವುದರಿಂದ ಸೋಂಕು ತೀವ್ರಗೊಳ್ಳಲು ಕಾರಣವಾಗುತ್ತಿದೆ, ಆದರೆ ಇದುವರೆಗೆ ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಗಳಲ್ಲಿ ಸೋಂಕು ಗಂಭೀರ ಪರಿಣಾಮ ಬೀರಿಲ್ಲ ಎಂಬುದು ಸಮಾಧಾನಕರ ವಿಷಯ. ಆದರೂ ಸಾರ್ವಜನಿಕರು ಮುಂಜಾಗ್ರತೆ ಮರೆಯಬಾರದು. ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಂಡಿದೆ. ಪಾಲಕರು ಆತಂಕಗೊಳ್ಳುವ ಅಗತ್ಯವಿಲ್ಲ. ಸೋಂಕಿತ ಮಕ್ಕಳಲ್ಲಿ ರೋಗ ಲಕ್ಷಣ ಕಂಡು ಬಂದಿಲ್ಲ. ಉಳಿದಂತೆ ಎಲ್ಲ ಶಾಲೆಗಳ ಮಕ್ಕಳ ತಪಾಸಣೆ ಮಾಡಲಾಗುತ್ತಿದೆ. ಗಂಗಮಾರೇಗೌಡ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ