ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ, ಹೊಸಕೋಟೆ ತಾಲೂಕುಗಳಲ್ಲಿ 64 ಗ್ರಾಪಂ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.
ನಾಮಪತ್ರ ಹಿಂಪಡೆಯುವ ಕಡೇ ದಿನವಾದ ಸೋಮವಾರ (ಡಿ.14) 64 ಸದಸ್ಯರು ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿಗಳು ೋಷಿಸಿದ್ದಾರೆ. ಈ ಮೂಲಕ ಮೊದಲ ಹಂತದ ಚುನಾವಣೆಯಲ್ಲಿ ನಿರಾಯಾಸವಾಗಿ ಸದಸ್ಯ ಸ್ಥಾನ ಗಟ್ಟಿಮಾಡಿಕೊಂಡ ಅಭ್ಯರ್ಥಿಗಳು ಸಂಭ್ರಮಪಟ್ಟರೆ, ಬೆಂಬಲಿಗರು ಅಭ್ಯರ್ಥಿಗಳಿಗೆ ಹೂ ಮಾಲೆ ಹಾಕಿ ಬಹುಪರಾಕ್ ಕೂಗಿದರು. ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು, ಅವಿರೋಧ ಆಯ್ಕೆಯಾದ ಸದಸ್ಯರು ಗ್ರಾಮಗಳಲ್ಲಿ ರೋಡ್‌ಶೋ ನಡೆಸಿದ್ದು ವಿಶೇಷವಾಗಿತ್ತು.
ಅಭ್ಯರ್ಥಿಪರ ವಕಾಲತ್ತು ವಹಿಸಿದ, ಅವಿರೋಧ ಆಯ್ಕೆಗೆ ಕಾರಣರಾದವರ ಋಣ ಸಂದಾಯ ಮಾಡುವ ನಿಟ್ಟಿನಲ್ಲಿ ಊಟೋಪಚಾರ, ಗುಂಡಿನ ಪಾರ್ಟಿಗಳು ಸಾಂಗವಾಗಿ ನಡೆದವು.
ಡಿ.7ರಿಂದ ನೆಲಮಂಗಲ ಹಾಗೂ ಹೊಸಕೋಟೆ ಪಂಚಾಯಿತಿಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡು, ಡಿ.14 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿತ್ತು. ಹೊಸಕೋಟೆ ಹಾಗೂ ನೆಲಮಂಗಲ ತಾಲೂಕಿನ 47 ಗ್ರಾಪಂನ 856 ಸ್ಥಾನಗಳಲ್ಲಿ ನೆಲಮಂಗಲದ ತ್ಯಾಮಗೊಂಡ್ಲು ಪಂಚಾಯಿತಿಗೆ 21 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಸಲ್ಲಿಕೆಯಾಗಿರುವ 3267 ನಾಮಪತ್ರಗಳ ಪೈಕಿ 44 ನಾಮಪತ್ರಗಳು ತಿರಸ್ಕೃತಗೊಂಡಿವೆ. 771 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಹೊಸಕೋಟೆಯಲ್ಲಿ 23 ತಿರಸ್ಕೃತ: ಹೊಸಕೋಟೆ ತಾಲೂಕಿನ 26 ಗ್ರಾಪಂಗಳ 494 ಸ್ಥಾನಗಳಿಗೆ ಸಲ್ಲಿಕೆಯಾಗಿರುವ 1,848 ನಾಮಪತ್ರಗಳ ಪೈಕಿ 23 ನಾಮಪತ್ರ ತಿರಸ್ಕೃತಗೊಂಡಿದ್ದು, 43 ಸದಸ್ಯರ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 451 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ನೆಲಮಂಗಲದಲ್ಲಿ 21 ತಿರಸ್ಕೃತ: ನೆಲಮಂಗಲ ತಾಲೂಕಿನ 21 ಗ್ರಾಪಂಗಳ 362 ಸ್ಥಾನಗಳಿಗೆ ಸಲ್ಲಿಕೆಯಾಗಿರುವ 1,419 ನಾಮಪತ್ರಗಳ ಪೈಕಿ 21 ನಾಮಪತ್ರ ತಿರಸ್ಕೃತಗೊಂಡಿದ್ದು, 21 ಸದಸ್ಯರ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 320 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ಕಣದಲ್ಲಿ 1222 ಅಭ್ಯರ್ಥಿಗಳು: ಚುನಾವಣೆ ಕಣದಲ್ಲಿ ಉಳಿದಿರುವ 1,222 ಅಭ್ಯರ್ಥಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಮತದಾರರ ಬೆನ್ನಿಗೆ ಬಿದ್ದಿರುವ ಅಭ್ಯರ್ಥಿಗಳು ಶತಾಯಗತಾಯ ಗೆಲುವು ಸಾಧಿಸಲು ಕಸರತ್ತು ಆರಂಭಿಸಿದ್ದಾರೆ. ಪ್ರತಿಷ್ಠೆಯ ಕಣವೆನಿಸಿರುವ ಪಂಚಾಯಿತಿ ಚುನಾವಣೆ ದಿನೇದಿನೆ ಕಾವೇರುತ್ತಿದ್ದು, ಡಿ.30ರ ಬಳಿಕ ಸ್ಪಷ್ಟ ಚಿತ್ರಣ ಬರಲಿದೆ.
2ನೇ ಹಂತ ಚಿತ್ರಣ19ಕ್ಕೆ: ದೊಡ್ಡಬಳ್ಳಾಪುರ ತಾಲೂಕಿನ 26 ಗ್ರಾಪಂ ಹಾಗೂ ದೇವನಹಳ್ಳಿ ತಾಲೂಕಿನ 20 ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿ.16 ನಾಮಪತ್ರ ಸಲ್ಲಿಸಲು ಕಡೇ ದಿನವಾಗಿದೆ. ಡಿ.19ರಂದು ಉಮೇದುವಾರಿಕೆೆ ಹಿಂಪಡೆಯಲು ಕಡೇ ದಿನವಾಗಿದ್ದು, ಅವಿರೋಧ ಆಯ್ಕೆ ಹಾಗೂ ಅಂತಿಮ ಕಣದಲ್ಲಿನ ಹುರಿಯಾಳುಗಳ ಬಗ್ಗೆ ಸ್ಪಷ್ಟ ಚಿತ್ರಣ ತಿಳಿದುಬರಲಿದೆ. ಡಿ.27ರಂದು ಈ ಭಾಗಗಳಲ್ಲಿ ಚುನಾವಣೆ ನಡೆಯಲಿದೆ.