ಜಿಲ್ಲೆ

ಉಡುಪಿ ಜಿಲ್ಲೆ ಮತ್ತೆ 121 ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಶನಿವಾರವೂ ದೊಡ್ಡ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ವರದಿಯಾಗಿದೆ. 16 ಮಕ್ಕಳು ಸಹಿತ 121 ಮಂದಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸೋಂಕಿತರಲ್ಲಿ ಉಡುಪಿಯ 30, ಕುಂದಾಪುರ 34, ಕಾರ್ಕಳದ 57 ಮಂದಿ ಇದ್ದಾರೆ. ಇದರಲ್ಲಿ 16 ಮಕ್ಕಳು, 71 ಪುರುಷರಿಗೆ, 34 ಮಹಿಳೆಯರಿದ್ದಾರೆ. ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಶನಿವಾರ ಜಿಲ್ಲೆಯಲ್ಲಿ 101 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 888ಕ್ಕೆ ಏರಿಕೆಯಾಗಿದೆ. 654 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾಡಳಿತಕ್ಕೆ ಸವಾಲು: ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿ 7 ದಿನ ಕ್ವಾರಂಟೈನ್ ಮುಗಿಸಿ ಮನೆಗೆ ಹೋದವರಲ್ಲಿ ಪಾಸಿಟಿವ್ ಬರುತ್ತಿದೆ. ಇವರನ್ನು ಪತ್ತೆ ಮಾಡಿ ಪುನಃ ಆಸ್ಪತ್ರೆಗೆ ಸೇರಿಸುವುದು ಜಿಲ್ಲಾಡಳಿತಕ್ಕೆ ಸವಾಲು. ಶುಕ್ರವಾರ ದೃಢಪಟ್ಟ 204 ಪ್ರಕರಣಗಳಲ್ಲಿ ಹಲವರನ್ನು ರಾತ್ರಿವರೆಗೂ ಒದ್ದಾಡಿ ಸಿಬ್ಬಂದಿ, ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನಿಯಮ ಬದಲಿಸಿದ್ದಕ್ಕೆ ಸರ್ಕಾರದ ವಿರುದ್ಧ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

ಒಂದೇ ಒಂದು ಮಾದರಿ ಸಂಗ್ರಹಿಸಿಲ್ಲ: ಜಿಲ್ಲೆಯಲ್ಲಿ ಕೋವಿಡ್-19 ಬೆಳವಣಿಗೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ಒಂದೇ ಒಂದು ಮಾದರಿ ಸಂಗ್ರಹಿಸಿಲ್ಲ. ಇನ್ನು 422 ವರದಿಗಳಷ್ಟೇ ಬರಲು ಬಾಕಿ ಇದ್ದು, ಜಿಲ್ಲೆಯಲ್ಲಿ ಇನ್ನೆರಡು ದಿನಗಳಲ್ಲಿ ಪಾಸಿಟಿವ್ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಶನಿವಾರ 222 ಮಂದಿಯ ವರದಿ ನೆಗೆಟಿವ್ ಬಂದಿದೆ. ಈ ನಡುವೆ ಮತ್ತೆ ಮಹಾರಾಷ್ಟ್ರದಿಂದ 88, ಕೇರಳದಿಂದ ನಾಲ್ಕು ಮಂದಿ ಆಗಮಿಸಿದ್ದಾರೆ.

107 ಕಡೆ ಸೀಲ್‌ಡೌನ್: ಜಿಲ್ಲೆಯಲ್ಲಿ ಶನಿವಾರ 121 ಮಂದಿಗೆ ಸೋಂಕು ಪತ್ತೆಯಾಗಿರುವುದರಿಂದ ಬೈಂದೂರು 44, ಕುಂದಾಪುರ 35, ಕಾರ್ಕಳ 18, ಉಡುಪಿ 5, ಬ್ರಹ್ಮಾವರ 1, ಹೆಬ್ರಿ 4 ಸಹಿತ 107 ಕಡೆಗಳಲ್ಲಿ ಕಂಟೇನ್ಮೆಂಟ್ ಜೋನ್ ಘೋಷಿಸಿ ಸೀಲ್‌ಡೌನ್ ಮಾಡಲಾಗಿದೆ.