ಜಿಲ್ಲೆ

ಪ್ರಾಥಮಿಕ ಶಾಲೆ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ; ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅನ್ವಯ

Tumakuru

ತುಮಕೂರು : ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪ್ರಾಥಮಿಕ ಶಾಲೆ ಹಂತದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಕರೊನಾ ಮೂರನೇ ಅಲೆಯ ಬಗ್ಗೆ ದೇಶದಲ್ಲಿ ಎಲ್ಲಿಯೂ ಆತಂಕದ ವಾತಾವರಣ ಇಲ್ಲ, ಶಾಲಾ ಮಕ್ಕಳು ಆರೋಗ್ಯದಿಂದಿರಲು ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2015ರಿಂದಲೇ ಕಟ್ಟಡ ನಿರ್ಮಾಣ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಇದು ಬಿಜೆಪಿ ಸರ್ಕಾರ ಬಂದ ನಂತರ ಮಾಡಿರುವುದಲ್ಲ, ದೇಶದಲ್ಲಿ ಪ್ರತಿಭಟನೆ ಮಾಡಲು ಎಲ್ಲರೂ ಸ್ವತಂತ್ರರು ಎಂದರು.

ಸರ್ಕಾರಿ ಶಾಲೆಗಳ ಮಕ್ಕಳ ಸುರಕ್ಷತೆಗೆ ಕ್ರಮಕೈಗೊಂಡಿದ್ದೇವೆ, ಶೇ.90 ಶಾಲೆಗಳು ನೆಲ ಮಹಡಿಯಲ್ಲಿಯೇ ಇದ್ದು ಬಾಗಿಲು ತೆರೆದರೆ ಮೈದಾನ ಅಥವಾ ರಸ್ತೆಗೆ ಬರುತ್ತಾರೆ, ಖಾಸಗಿ ಶಾಲೆಗಳನ್ನು ನಮ್ಮ ಶಾಲೆಗಳ ಜತೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲ, ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸಬೇಕು ಎಂದರು.

ಶಿವಾಜಿ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿರುವ ಪ್ರತ್ಯೇಕ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಸಿ.ನಾಗೇಶ್, ದೇಶದಲ್ಲಿ ಸಮಾಜವನ್ನು ಒಡೆದು ಬೇಳೆಬೇಯಿಸಿಕೊಳ್ಳುವ ಜನರು ಅವತ್ತಿನಿಂದ ಇವತ್ತಿನವರೆಗೂ ಇದ್ದಾರೆ. ದೇಶಕ್ಕಾಗಿ ಹೋರಾಡಿದವರ ಪುತ್ಥಳಿಗೆ ಗೌರವಿಸಬೇಕಿರುವುದು ಎಲ್ಲರ ಕರ್ತವ್ಯ ಎಂದರು.

ಎಪಿಎಂಸಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆದ ನಂತರ ರಾಜ್ಯದಲ್ಲಿಯೂ ಜಾರಿಯಾಗಿದ್ದ ಕಾಯ್ದೆ ರದ್ದಾಗುವುದು ಸ್ವಾಭಾವಿಕ, ಅದರ ಅರಿವಿಲ್ಲದ ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಮುಂದಾದರೆ ಏನು ಹೇಳೊಣ, ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ಗೆ ಕಾಯ್ದೆ, ಮಸೂದೆ ಬಗ್ಗೆ ತಿಳಿವಳಿಕೆಯೇ ಹೋಗಿರಬಹುದು ಎಂದು ಮೊದಲಿಸಿದರು.

ಗುರು, ಯೋಧರ ಪಾತ್ರ ಮಹತ್ವದ್ದು : ಉತ್ತಮ ಸಮಾಜ ಸೃಷ್ಟಿಸುವಲ್ಲಿ ಶಿಕ್ಷಕರು, ಅಧಿಕಾರಿಗಳು ಸೇರಿ ಶಿಕ್ಷಣ ಇಲಾಖೆಯ ಎಲ್ಲ ಸಿಬ್ಬಂದಿಯ ಪ್ರಾಮಾಣಿಕ ಪ್ರಯತ್ನ ಮಹತ್ವದ್ದಾಗಿದ್ದು, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯದನ್ನು ಸೃಷ್ಟಿಸಿ ಕೆಟ್ಟದ್ದನ್ನು ಶಿಕ್ಷಿಸುವ ಜವಾಬ್ದಾರಿ ಮತ್ತು ಶಕ್ತಿ ಶಿಕ್ಷಕನಿಗೆ ಇದೆ. ಹಿಂದಿನ ಗುರುಕುಲ ಶಿಕ್ಷಣ ಪದ್ಧತಿಯಿಂದ ಇಂದಿನ ಶಿಕ್ಷಣದವರೆಗೂ ಗುರುವಿಗೆ ಶ್ರೇಷ್ಠ ಸ್ಥಾನ-ಗೌರವವಿದೆ. ಪ್ರತಿಯೊಂದು ಮಗು ಒಬ್ಬ ಶಿಕ್ಷಕನಲ್ಲಿ ಜ್ಞಾನ ಮತ್ತು ಚಾರಿತ್ರ್ಯ ಎರಡನ್ನೂ ಗುರುತಿಸುತ್ತಿರುತ್ತದೆ, ಅಂತಹ ಶ್ರೇಷ್ಠ ಸ್ಥಾನದಲ್ಲಿರುವಾತ ಮಗುವಿಗೆ ಮಾದರಿಯಾಗಿ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದರು.

ಗುರುತರ ಜವಾಬ್ದಾರಿ ನಿರ್ವಹಿಸುವುದು ಅತ್ಯಂತ ಸೂಕ್ಷ್ಮ ಕೆಲಸವಾಗಿದೆ, ದೇಶದಲ್ಲಿ ಗಡಿ ಕಾಯುವ ಯೋಧನ ಪಾತ್ರ ಎಷ್ಟು ಪ್ರಾಮುಖ್ಯತೆ ಹೊಂದಿದೆಯೋ ಸಮಾಜದಲ್ಲಿ ಭವಿಷ್ಯದ ಉತ್ತಮ ನಾಗರಿಕರನ್ನು ಮಾನಸಿಕವಾಗಿ ತಯಾರು ಮಾಡುವಲ್ಲಿ ಶಿಕ್ಷಕರ ಪಾತ್ರವೂ ಅಷ್ಟೇ ಪ್ರಮುಖವಾಗಿದೆ ಎಂದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಗುರುವಿನ ಸ್ಥಾನ ಸೃಷ್ಟಿಕರ್ತ ಬ್ರಹ್ಮನಿಗೂ ಮಿಗಿಲಾದದ್ದು. ಸೃಷ್ಟಿಯಲ್ಲಿ ಹೆಚ್ಚು ಗೌರವಕ್ಕೆ ಪಾತ್ರವಾಗುವ ಸ್ಥಾನ ಗುರುವಿನದ್ದು. ಗುರು ಕೇವಲ ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ, ಜೀವನದ ಮಹತ್ವ, ಅರಿವು, ಕತ್ತಲೆಯಲ್ಲಿರುವವರಿಗೆ ಬೆಳಕು ತೋರಿಸುವ ಮಾರ್ಗದರ್ಶಿ ಎಂದರು. ಶಿಕ್ಷಣ ಇಲಾಖೆ ಎಂಬುದು ರಾಷ್ಟ್ರದ ಮೊದಲ ಪ್ರಜೆಯಿಂದ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾತೃ. ಪ್ರತೀ ತಾಲೂಕಿನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ತನ್ನ ವ್ಯಾಪ್ತಿಯ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.

ಸರ್ಕಾರಿ ಶಾಲೆಗಳ ಜತೆ ಖಾಸಗಿ ಶಾಲೆಗಳನ್ನು ಹೋಲಿಸುವುದು ಬೇಡ, ಕೋಟೆಯಂತೆ ಕಟ್ಟಡ ನಿರ್ಮಿಸಿಕೊಂಡು ಹಿಂದೆ-ಮುಂದೆ ಕಾವಲುಗಾರನನ್ನು ಇಟ್ಟುಕೊಂಡು ಯಾವುದೇ ಸರ್ಕಾರಿ ಶಾಲೆ ನಡೆಯುತ್ತಿಲ್ಲ. ಆದರೆ, ಮಕ್ಕಳ ಸುರಕ್ಷತೆಯ ಜತೆ ಸರ್ಕಾರ ರಾಜಿಯಾಗುವುದಿಲ್ಲ, ಶಾಲೆ ನವೀಕರಣದ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲಿಸಬೇಕಷ್ಟೇ. ಬಿ.ಸಿ.ನಾಗೇಶ್ ಶಿಕ್ಷಣ ಸಚಿವ